ಪಠ್ಯಕ್ರಮ ಪರಿಷ್ಕರಣೆ ಅಂತಿಮ ಹಂತಕ್ಕೆ

ನವದೆಹಲಿ,ಅ.೧೨-ಕೇಂದ್ರ ಸರ್ಕಾರವು ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸಲು ಮತ್ತು ಹೊಸ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ಅಂತಿಮ ಹಂತಕ್ಕೆ ಚಾಲನೆ ನೀಡಿದ್ದು,
ಖ್ಯಾತ ಲೇಖಕಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಮತ್ತು ಖ್ಯಾತ ಗಾಯಕ ಶಂಕರ್ ಮಹದೇವನ್ ಅವರಿಗೆ ಸೂಕ್ತ ಮನ್ನಣೆ ನೀಡಲಾಗಿದೆ .ಮೂರರಿಂದ ೧೨ನೇ ತರಗತಿವರೆಗೆ ಪಠ್ಯಕ್ರಮ ವಿನ್ಯಾಸ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಸೇರಿದಂತೆ ಒಟ್ಟು ೧೯ ಸದಸ್ಯರನ್ನು ಒಳಗೊಂಡ ರಾಷ್ಟ್ರೀಯ ಪಠ್ಯಕ್ರಮ ಮತ್ತು ಪರೀಕ್ಷಾ ಕಲಿಕಾ ಸಾಮಗ್ರಿ ಸಮಿತಿ (ಎನ್‌ಎಸ್‌ಎಟಿಸಿ)ಯನ್ನು ರಚಿಸಲಾಗಿದೆ. ಸಮಿತಿಯ ನೇತೃತ್ವವನ್ನು ರಾಷ್ಟ್ರೀಯ ಶಿಕ್ಷಣ ಯೋಜನೆ ಮತ್ತು ಆಡಳಿತದ ಕುಲಪತಿ ಎಂಸಿ ಪಂತ್ ವಹಿಸಲಿದ್ದಾರೆ.
ಹೊಸ ಸಮಿತಿಯು ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರ ಭಾಗವಾಗಿ ಕೆ ಕಸ್ತೂರಿರಂಗನ್ ನೇತೃತ್ವದ ಸ್ಟೀರಿಂಗ್ ಸಮಿತಿಯು ಅಭಿವೃದ್ಧಿಪಡಿಸಿದ ಪಠ್ಯಕ್ರಮಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಹೊಸ ಸಮಿತಿಯು ಶಾಲಾ ಪಠ್ಯಕ್ರಮ, ಬೋಧನೆ ಮತ್ತು ಕಲಿಕಾ ಸಾಮಗ್ರಿಗಳ (೨-೧೨ ತರಗತಿಗಳಿಗೆ) ಅಭಿವೃದ್ಧಿಯ ಜವಾಬ್ದಾರಿಯನ್ನು ಹೊಂದಿರುತ್ತದೆ. ಒಂದು ಮತ್ತು ಎರಡನೆ ತರಗತಿಗಳ ಪಠ್ಯಕ್ರಮ ವಿಮರ್ಶೆಯೂ ಅಗತ್ಯ ಎಂದು ಅಭಿಪ್ರಾಯಪಟ್ಟಿದೆ. ಎನ್‌ಎಸ್‌ಟಿಸಿ ಅಭಿವೃದ್ಧಿಪಡಿಸಿದ ಮತ್ತು ಅಂತಿಮಗೊಳಿಸಿದ ಪಠ್ಯಕ್ರಮವನ್ನು ಎನ್‌ಸಿಇಆರ್‌ಟಿ ವಿತರಿಸುತ್ತದೆ.