ಪಠ್ಯಕ್ರಮದೊಂದಿಗೆ ಜ್ಞಾನ ವೃದ್ಧಿಸಿಕೊಳ್ಳಿ-ರಂಗನಾಥ್

ಹಾವೇರಿ: ನ.20 (ಕರ್ನಾಟಕ ವಾರ್ತೆ): ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಕಿರು ಪರಿಚಯಿಸುವ ಕಾರ್ಯಕ್ರಮವನ್ನು ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ವಾರ್ತಾಧಿಕಾರಿ ಬಿ.ಆರ್.ರಂಗನಾಥ್ ಉದ್ಘಾಟಿಸಿ ಜ್ಞಾನಾಧಾರಿತ ಇ-ತಂತ್ರಜ್ಞಾನ ಕಲಿಕಾ ವ್ಯವಸ್ಥೆಯ ಇಂದಿನ ದಿನಗಳಲ್ಲಿ ಭವಿಷ್ಯದಲ್ಲಿ ಶಿಕ್ಷಕರಾಗುವವರಿಗೆ ಪಠ್ಯಕ್ರಮ ಬೋಧನೆಯ ಜೊತೆಗೆ ಇತರ ಜ್ಞಾನಗಳ ಕಲಿಕೆ ಅತ್ಯವಶ್ಯಕವಾಗಿದೆ. ಭವಿಷ್ಯದಲ್ಲಿ ನಾನಾ ಇಲಾಖೆಗಳಲ್ಲಿ ಸೇವೆಗೆ ಸೇರುವ ಅವಕಾಶವಿರುವ ಬಿಇಡಿ ಪ್ರಶಿಕ್ಷಣಾರ್ಥಿಗಳು ವಿಸ್ತಾರವಾದ ಜ್ಞಾನ ಮತ್ತು ಕಲಿಕೆಯ ಜೊತೆಗೆ ಶಿಷ್ಟಾಚಾರ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಅವರು ಶಿಕ್ಷಣ ಇಲಾಖೆಯ ಸಮಗ್ರ ಕಾರ್ಯ ಚಟುವಟಿಕೆಗಳು, ಯೋಜನೆಗಳು, ವಿವಿಧ ಸ್ತರದ ಆಡಳಿತ ವ್ಯವಸ್ಥೆಯ ಸಮಗ್ರ ಚಿತ್ರಣವನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಬಿ.ಆರ್.ಸಿ. ಭಗವಂತರಾಯ, ದೈಹಿಕ ಶಿಕ್ಷಣ ನಿರ್ದೇಶಕ ಇಚ್ಚಂಗಿ, ಶಿಕ್ಷಣಾಧಿಕಾರಿಗಳಾದ ಮಂಜುನಾಥ, ಸಿದ್ದರಾಜ, ನಾಗರಾಜ, ಟಿ.ಎಂ.ಇ.ಎ. ಕಾಲೇಜು ಪ್ರಾಚಾರ್ಯರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.