ಪಠ್ಯಕ್ಕಿಂತಲೂ ಅನುಭವದ ಮೂಲಕ ಕಲಿಕೆ ಅಪಾರ: ಸಿಎಂ

ಬೆಂಗಳೂರು, ಸೆ. 18- ಪಠ್ಯಕ್ಕಿಂತ ಅನುಭವದ ಮೂಲಕ ಕಲಿಯುವುದು ಸಾಕಷ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಇಂದಿಲ್ಲಿ ಹೇಳಿದ್ದಾರೆ.

ಸೃಷ್ಟಿಕರ್ತನನ್ನು ಹೊರತುಪಡಿಸಿ ನೋವನ್ನು ಕಡಿಮೆ ಮಾಡುವ ಶಕ್ತಿ ಇರುವುದು ವೈದ್ಯರಿಗೆ ಮಾತ್ರ ಆದ್ದರಿಂದ ವೈದ್ಯರಿಗೆ ಮಾನವೀಯ ಗುಣ ಬಹಳ ಮುಖ್ಯ ಎಂದು ತಿಳಿಸಿದ್ದಾರೆ.

ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್ನ ವತಿಯಿಂದ ಆಯೋಜಿಸಿದ್ದ 2016-17ರ ಪ್ರಥಮ ಎಂಬಿಬಿಎಸ್ ಬ್ಯಾಚ್ ನ ಮೊದಲನೆ ಘಟಿಕೋತ್ಸವ ಸಮಾರಂಭ – 2022ರಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

5 ವರ್ಷಗಳ ಕಾಲ ವೈದ್ಯಕೀಯ ವ್ಯಾಸಂಗ ಬಳಿಕ ಭವಿಷ್ಯ ನಮಗೆ ಗೊತ್ತಿರಬೇಕು. ಒಮ್ಮೆ ವಿದ್ಯಾರ್ಥಿ ಆದವನು ಜೀವನ ಪರ್ಯಂತ ವಿದ್ಯಾರ್ಥಿಯಾಗೇ ಇರುತ್ತಾನೆ. ಇವತ್ತು ಸರ್ಟಿಫಿಕೇಟ್ ತೆಗೆದುಕೊಂಡ ಕೂಡಲೇ ಎಲ್ಲವೂ ಮುಗಿಯಿತು ಎಂದಲ್ಲ. ಕಾಲೇಜಿನಲ್ಲಿ ಪಠ್ಯ ಓದಿ ಪರೀಕ್ಷೆ ಬರೆಯುತ್ತೇವೆ. ಆದರೆ ಜೀವನದಲ್ಲಿ ಪರೀಕ್ಷೆ ಗಳ ಮೂಲಕ ನಾವು ಕಲಿಯುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವೈದ್ಯರಿಗೆ ಸಹಾನುಭೂತಿ ಇರಬೇಕು. ಯಾಕೆಂದರೆ ಎಷ್ಟೋ ಜನ ಬಡವರು ಚಿಕಿತ್ಸೆಗೆಂದು ಬರುತ್ತಾರೆ. ಅವರೊಂದಿಗೆ ಬೆರೆತು ಕಾಯಿಲೆಗೆ ಚಿಕಿತ್ಸೆ ನೀಡಬೇಕು. ಆಗಲೇ ನೀವು ಕಲಿತ ವಿದ್ಯೆ ನಿಮ್ಮ ಕೈ ಹಿಡಿಯುತ್ತದೆ ಎಂದು ತಿಳಿಸಿದರು.

ಕೋವಿಡ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಚಲ ನಿರ್ಧಾರದಿಂದ ಭಾರತ ಇಂದು ಆಪತ್ತನ್ನು ಮೀರಿ ನಿಂತಿದೆ. 130 ಕೋಟಿ ಜನಸಂಖ್ಯೆಯ ರಾಷ್ಟ್ರಕ್ಕೆ ಕೋವಿಡ್ ಎದುರಿಸೋದು ಸುಲಭವಲ್ಲ ಎಂದು ಇಡೀ ಪ್ರಪಂಚ ಮಾತನಾಡಿಕೊಳ್ಳುತ್ತಿದ್ದಾಗ ನಮ್ಮ ವೈದ್ಯರು ಪ್ರಾಣದ ಹಂಗು ತೊರೆದು ಹೋರಾಡಿ ಜನರ ಪ್ರಾಣ ಉಳಿಸಿದರು ಎಂದರು.

ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಉಪಕುಲಪತಿ ಎಂಕೆ ರಮೇಶ್, ಏಮ್ಸ್ ಕಾಲೇಜು ಚೇರ್ ಮೆನ್ ಮುನಿರಾಜು, ಪುಷ್ಪ ಮುನಿರಾಜು, ಡಾ ಶಿವಪ್ರಕಾಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.