ಪಠ್ಯಕೃತಿಗಳು ಪರಿಪೂರ್ಣವಾಗಿ ಬೆಳೆಯಲು ಪೂರಕವಾಗಿರಬೇಕು: ಡಾ. ಮಹೇಶ ಚಿಂತಾಮಣಿ

ವಿಜಯಪುರ: ನ.29:ಪದವಿ ಹಂತದಲ್ಲಿರುವ ಪಠ್ಯಕೃತಿಗಳು ಬಹುಶಿಸ್ತಿಯ ಅಧ್ಯಯನದ ನೆಲೆಯನ್ನು ಹೊಂದಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಪರಿಪೂರ್ಣ ಜ್ಞಾನವಂತರಾಗಿ ಬೆಳೆಯಲು ಪೂರಕವಾಗಿರಬೇಕೆಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಹೇಶ ಚಿಂತಾಮಣಿ ಅಭಿಪ್ರಾಯಪಟ್ಟರು.
ಅವರು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕಾಲೇಜು ಕನ್ನಡ ಪ್ರಾಧ್ಯಾಪಕರ ಸಂಘ, ವಿಜಯಪುರ ವಿ.ವಿ.ಯ ಕನ್ನಡ ವಿಭಾಗದಲ್ಲಿ ಹಮ್ಮಿಕೊಂಡ ಕನ್ನಡ ಪಠ್ಯಕ್ರಮ ಕುರಿತು ಚಿಂತನೆ ಹಾಗೂ ನಿವೃತ ಪ್ರಾಧ್ಯಾಪಕರಿಗೆ ಮತ್ತು ಪಿಎಚ್‍ಡಿ ಪದವಿ ಪುರಸ್ಕøತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಭಾಷಾವಿಷಯಗಳ ಪದವಿ ಪಠ್ಯಕೃತಿಗಳು ನಿಗದಿತ ಸಮಯಾನುಸಾರವಾಗಿ ಬದಲಾವಣೆಯಾಗುತ್ತವೆ ಇವುಗಳನ್ನು ರಚಿಸುವಾಗ, ಸಂಪಾದಿಸುವಾಗ ವರ್ತಮಾನದ ಗ್ರಹಿಕೆಗಳನ್ನು ಅನುಲಕ್ಷಿಸಿ ವಿಷಯನ್ನು ನಿಗದಿಪಡಿಸಿ ಪಠ್ಯಕೃತಿಗಳನ್ನು ರಚಿಸಲಾಗಿರುತ್ತದೆ. ಇದನ್ನು ಗಮನಿಸಿ ಪ್ರಾಧ್ಯಾಪಕರು ಪಾಠಮಾಡಬೇಕೆಂದು ಸಲಹೆ ನೀಡಿದರು.
ಸನ್ಮಾನ ಸ್ವಿಕರಿಸಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕರಾದ ಕಲಬುರ್ಗಿಯ ಮಹಿಳಾಪರ ಹೋರಾಟಗಾರರಾದ ಡಾ. ಮೀನಾಕ್ಷಿ ಬಾಳಿಯವರು ಮಾತನಾಡಿ-ಶಿಕ್ಷಣದಲ್ಲಿ ರಾಜಕೀಯ ಬೆರೆಸಬಾರದು. ಭಾಷಾಪಠ್ಯಗಳು ವಿದ್ಯಾರ್ಥಿಗಳಲ್ಲಿ ವೈಚಾರಕತೆ, ವೈಜ್ಞಾನಿಕತೆ ಬೆಳೆಯಲು ಕಾರಣವಾಗಬೇಕು ಬದಲಾವಣೆಗೊಂಡ ಪಠ್ಯಗಳನ್ನು ಪಾಠಮಾಡಲು ಪ್ರಾಧ್ಯಾಪಕರಿಗೆ ಪುನಶ್ಚೇತನ ತರಬೇತಿಗಳನ್ನು ವಿಶ್ವವಿದ್ಯಾನಿಲಯ ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ಸಮಾರಂಭದ ಆಶಯ ನುಡಿಗಳನ್ನು ಹೇಳಿದ ಕಲಬುರಗಿಯ ವಿ.ಜಿ. ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಾಗೇಂದ್ರ ಮಸೂತಿಯವರು ಪಠ್ಯಕೃತಿಗಳ ರಚನೆ ಹಾಗೂ ಪಾಠಗಳ ಕುರಿತು ವಿಶ್ಲೇಷಣೆ ಮಾಡಿದರು.
ಅತಿಥಿಗಳಾಗಿ ಪಾಲ್ಗೋಂಡ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ನಾರಾಯಣ ಪವಾರ ಅವರು ಪಠ್ಯಕೃತಿ ರಚಿಸುವವರು ನಿಷ್ಠರತೆ ಹಾಗೂ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಕನ್ನಡ ಪ್ರಾಧ್ಯಾಪಕರ ಸಂಘದ ಅಧ್ಯಕ್ಷರಾದ ಸಿಕ್ಯಾಬ ಕಾಲೇಜಿನ ಡಾ. ಮಲ್ಲಿಕಾರ್ಜುನ ಮೇತ್ರಿಯವರು ಮಾತನಾಡಿ ಹೊಸಪಠ್ಯಗಳು ಬಂದಾಗ ಅವುಗಳ ಬದಲಾವಣೆಯ ವಿಚಾರಗಳನ್ನು ಪ್ರಾಧ್ಯಾಪಕರಾದ ನಾವು ಅರಿತಕೊಳ್ಳಬೇಕು. ಹೊಸ ತಲೆಮಾರಿನ ಬರಹಗಾರರ ಬರಹಗಳನ್ನು ಪಠ್ಯದಲ್ಲಿ ಅಳವಡಿಸಿಕೊಳ್ಳುವ ಜರೂರತೆ ಇದೆ. ಜೊತೆಗೆ ಕನ್ನಡ ಭಾಷಾ ಪ್ರಾಧ್ಯಾಪಕರು ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿ ಕಲಿಯುವದು ಅನಿವಾರ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಎಂ ಮಂಜುನಾಥ ಪ್ರಾರ್ಥನೆಗೀತೆ ಹೇಳಿದರು,ಡಾ. ಯುವರಾಜ ಮಾದನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ. ಮಲ್ಲನಗೌಡ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು, ಪ್ರೊ. ಎಸ್. ಬಿ ಗಾಜಿಪುರ ನಿರೂಪಿಸದರು. ಡಾ. ಅಶ್ವಿನಿ ಬಬಲಿ ವಂದಿಸಿದರು.
ಕ.ರಾ.ಅ.ಮ.ಮ.ವಿ.ವಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ. ಜೋಶಿ ಕಾರ್ಯದರ್ಶಿಗಳಾದ ಡಾ. ಮಹೇಶ ಗಂವಾರ, ವಿವಿದ ಕಾಲೇಜುಗಳ ಕನ್ನಡ ಪ್ರಾಧ್ಯಾಪಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.