
ಮುಂಬೈ, ಮಾ. ೨೯- ವಿವಾದಗಳಿಂದಲೇ ಸುದ್ದಿಯಾದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ ಆಕ್ಷನ್ ಥ್ರಿಲ್ಲರ್ ‘ಪಠಾಣ್’ ಸಿನಿಮಾ ಬಾಕ್ಸ್‌ಆಫೀಸ್ ನಲ್ಲಿ ಕಮಾಲ್ ಮಾಡಿತ್ತು.
ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಬಾಲಿವುಡ್ ಕಿಂಗ್ ಖಾನ್ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಜೊತೆ ಎಸ್‌ಆರ್ಕೆ ನಟನೆಯ ಈ ಚಿತ್ರ ಹಲವರ ಕೆಂಗಣ್ಣಿಗೆ ಗುರಿಯಾಗಿ ಬಿಡುಗಡೆಯಾಗಿತ್ತು.
ಭಾರತದ ಸಿನಿಮಾಗಳು ಪಾಕಿಸ್ತಾನದಲ್ಲಿ ರಿಲೀಸ್ ಆಗುತ್ತಿಲ್ಲ. ಆದರೆ ಒಟಿಟಿ ಮೂಲಕ ಅಲ್ಲಿನ ಪ್ರೇಕ್ಷಕರು ಭಾರತದ ಚಿತ್ರಗಳನ್ನು ನೋಡುತ್ತಾರೆ. ‘ಪಠಾಣ್’ ಸಿನಿಮಾ ಇತ್ತೀಚೆಗೆ ಒಟಿಟಿಗೆ ಕಾಲಿಟ್ಟಿತು. ಈ ಚಿತ್ರವನ್ನು ಪಾಕಿಸ್ತಾನಿ ಪ್ರೇಕ್ಷಕರು ನೋಡಿ, ವಿಮರ್ಶೆ ತಿಳಿಸುತ್ತಿದ್ದಾರೆ. ಪಾಕಿಸ್ತಾನದ ನಟ ಯಾಸಿರ್ ಹುಸೇನ್ ಅವರು ‘ಪಠಾಣ್’ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
‘ಪಠಾಣ್’ ಪ್ರಪಂಚದಾದ್ಯಂತ ಸದ್ದು ಮಾಡಿದರೂ ಕೂಡ ಪಾಕಿಸ್ತಾನಿ ನಟ, ಯಾಸಿರ್ ಹುಸೈನ್ ಅವರು ಪ್ರಭಾವಿತರಾದಂತೆ ಕಾಣುತ್ತಿಲ್ಲ. ಚಿತ್ರ ಕಥೆಗಾರನೂ ಆಗಿರುವ ಪಾಕಿಸ್ತಾನಿ ನಟ, ಈ ಸಿನಿಮಾಗೆ ನಕಾರಾತ್ಮಕ ವಿಮರ್ಶೆಯನ್ನು ನೀಡಿದ್ದಾರೆ. ಸೂಪರ್ ಹಿಟ್ ಸಿನಿಮಾವನನ್ನು ಸ್ಟೋರಿಲೆಸ್ ವಿಡಿಯೋ ಗೇಮ್’ ಎಂದು ಟೀಕಿಸಿದ್ದಾರೆ.
ತಮ್ಮ ವಿಮರ್ಶೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ’ಈಗಾಗಲೇ ನೀವು ಮಿಷನ್ ಇಂಪಾಸಿಬಲ್ ಚಿತ್ರವನ್ನು ನೋಡಿದ್ದೀರಿ ಎಂದಾದರೆ ನಿಮಗೆ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರವು ಒಂದು ಕಥೆಯಿಲ್ಲದ ವಿಡಿಯೋ ಗೇಮ್ ರೀತಿ ಅನಿಸುತ್ತದೆ. ಅದಕ್ಕಿಂತ ಹೆಚ್ಚೇನೂ ಇಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.
ಟಿವಿ ಮತ್ತು ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಯಾಸಿರ್ ಹುಸೈನ್ ೨೦೧೫ರಲ್ಲಿ ಕರಾಚಿ ಸೆ ಲಾಹೋರ್ ಸಿನಿಮಾ ಮೂಲಕ ಪಾಕಿಸ್ತಾನಿ ಚಲನಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆ ನಟಿ ಇಕ್ರಾ ಅಜೀಜ್ ಅವರನ್ನು ವಿವಾಹವಾಗಿರುವ ಯಾಸಿರ್ ಪ್ರಸ್ತುತ ಬಾಂದಿ ಎಂಬ ಸೀರಿಸ್‌ನಲ್ಲಿ ನಕಾರಾತ್ಮಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.