ಪಟ್ಟಾಭಿಷೇಕ

ಕಂಠೀರವ ಕ್ರೀಡಾಂಗಣದಲ್ಲಿ ಜನ ಸಾಗರ

ಬೆಂಗಳೂರು,ಮೇ೨೦:ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಿದರು.ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಜತೆ ೮ ಮಂದಿ ಸಂಪುಟ ದರ್ಜೆ ಸಚಿವರಾಗಿ ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕೃತವಾಗಿ ಇಂದಿನಿಂದ ಅಸ್ಥಿತ್ವಕ್ಕೆ ಬಂದಂತಾಗಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಅಪಾರ ಜನಸ್ತೋಮದ ನಡುವೆ ಸಿದ್ದರಾಮಯ್ಯ ೩೧ನೇ ಮುಖ್ಯಮಂತ್ರಿಯಾಗಿ, ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ, ಸಂಪುಟ ದರ್ಜೆ ಸಚಿವರಾಗಿ ಡಾ. ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕಖರ್ಗೆ, ರಾಮಲಿಂಗಾರೆಡ್ಡಿ, ಬಿ.ಝೆಡ್. ಜಮೀರ್‌ಅಹ್ಮದ್‌ಖಾನ್ ಇವರುಗಳು ಪ್ರಮಾಣವಚನ ಸ್ವೀಕರಿಸಿದರು.ರಾಜ್ಯಪಾಲ ಥಾವರ್‌ಚಂದ್ ಗೆಲ್ಹೋಟ್ ಅವರು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ೮ ಮಂದಿ ಸಂಪುಟ ದರ್ಜೆ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆಯನ್ನು ಬೋಧಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ರೀ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಡಾ. ಜಿ. ಪರಮೇಶ್ವರ್ ಸಂವಿಧಾನ ಹೆಸರಿನಲ್ಲಿ, ಸತೀಶ್‌ಜಾರಕಿಹೊಳಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಹೆಸರಿನಲ್ಲಿ. ಜಮೀರ್ ಅಹ್ಮದ್‌ಖಾನ್ ಅಲ್ಲಾ ಮತ್ತು ತಾಯಿಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷ. ಉಳಿದಂತೆ ಕೆ.ಹೆಚ್ ಮುನಿಯಪ್ಪ, ಎಂ.ಬಿ ಪಾಟೀಲ್, ಪ್ರಿಯಾಂಕ ಖರ್ಗೆ, ಕೆ.ಜೆ. ಜಾರ್ಜ್, ರಾಮಲಿಂಗರೆಡ್ಡಿ ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯರವರು ೨ನೇ ಬಾರಿಗೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದು, ಡಿ.ಕೆ ಶಿವಕುಮಾರ್ ಪ್ರಥಮ ಬಾರಿಗೆ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು.
ನೂತನ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಹಾಗೂ ಸಚಿವರ ಪದಗ್ರಹಣ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.
ಮುಗಿಲು ಮುಟ್ಟಿದ ಘೋಷಣೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಂಭ್ರಮ-ಸಡಗರದಲ್ಲಿ ಮುಳುಗಿದ್ದು, ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿದ್ದವು. ಕಂಠೀರವ ಕ್ರೀಡಾಂಗಣದಲ್ಲಿ ಎಲ್ಲೆಲ್ಲೂ ಕಾಂಗ್ರೆಸ್ ಧ್ವಜಗಳು ಹಾರಾಡುತ್ತಿದ್ದು, ಇಡೀ ಪ್ರದೇಶ ಕಾಂಗ್ರೆಸ್‌ಮಯವಾಗಿತ್ತು.
೨೦೧೩ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯರವರು ಕಂಠೀರವ ಕ್ರೀಡಾಂಗಣದಲ್ಲೇ ಪ್ರಮಾಣವಚನ ಸ್ವೀಕರಿಸಿದ್ದು, ಈಗ ಮತ್ತೆ ೧೦ ವರ್ಷದ ನಂತರ ೨ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾರವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ರವರು ಅಭಿನಂದಿಸಿದರು.

ರಾಹುಲ್-ಪ್ರಿಯಾಂಕ, ಬಿಜೆಪಿ ವಿರೋಧಿ ಪಕ್ಷಗಳ ಸಿಎಂಗಳು ಭಾಗಿ
ಈ ಪ್ರಮಾಣವಚನ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್, ಪುದುಚೆರಿಯ ಮುಖ್ಯಮಂತ್ರಿ ರಂಗಸ್ವಾಮಿ, ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್ ಸೋರೇನ್, ಛsತ್ತೀಸ್‌ಘಡದ ಮುಖ್ಯಮಂತ್ರಿ ಭೂಪೇಶ್ ಬಗೇಲ್, ರಾಜಸ್ತಾನ ಮುಖ್ಯಮಂತ್ರಿ ಅಶೋಕ್‌ಗೆಲ್ಹೋಟ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಎನ್‌ಸಿಪಿ ನಾಯಕ ಶರದ್‌ಪವಾರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ಠಾಕ್ರೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ಯಾಧವ್, ಎಡಪಕ್ಷಗಳ ಮುಖಂಡರುಗಳಾದ ಸೀತಾರಾಮ್ ಯಚೂರಿ, ಡಿ. ರಾಜಾ, ಆರ್‌ಜೆಡಿ ಮುಖ್ಯಸ್ಥ, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾಧವ್, ಜಮ್ಮು-ಕಾಶ್ಮೀರ ಮಾಜಿ ಸಿಎಂಗಳಾದ ಫಾರೂಕ್‌ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಆರ್‌ಎಲ್‌ಡಿ ಅಧ್ಯಕ್ಷ ಜಯಂತ್ ಚೌಧರಿ, ಕೇರಳ ಕಾಂಗ್ರೆಸ್ ಮುಖ್ಯಸ್ಥ ಜೋತ್ಸೆ ಕೆ. ಮಣಿ, ಎಂಡಿಎಂಕೆ ಅಧ್ಯಕ್ಷ ವೈಕೊ, ಮಧ್ಯಪ್ರದೇಶದ ಜೆಡಿಯು ಅಧ್ಯಕ್ಷ ಲಲನ್‌ಸಿಂಗ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್, ನಟ ಕಮಲ್‌ಹಾಸನ್ ಸೇರಿದಂತೆ ವಿವಿಧ ರಾಜ್ಯಗಳ ರಾಜಕೀಯ ಮುಖಂಡರುಗಳು ಭಾಗಿಯಾಗಿದ್ದರು.
ನೂತನ ಶಾಸಕರು, ಸಂಸದರು ಭಾಗಿ
ಈ ಪ್ರಮಾಣವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನ ಎಲ್ಲ ನೂತನ ಶಾಸಕರು, ಸಂಸದರು ಹಾಗೂ ಎಲ್ಲ ಮುಖಂಡರು ಭಾಗಿಯಾಗಿದ್ದರು. ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನೂತನ ಸಚಿವರುಗಳ ಕುಟುಂಬಸ್ಥರು ಪಾಲ್ಗೊಂಡಿದ್ದರು.