ಪಟ್ಟಭದ್ರದ ಮಾತುಗಳಿಗೆ ಅಧಿಕಾರಿಗಳು ತಲೆದೂಗಬೇಕಾಗಿಲ್ಲ : ನೇಮಿರಾಜ್ ನಾಯ್ಕ್


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮಾ.08 ತಾಲೂಕು ಮಟ್ಟದ ಅಧಿಕಾರಿಗಳು ಸಂಬಂಧಪಡದ  ಪಟ್ಟ ಭದ್ರ ಹಿತಾಸಕ್ತಿಗಳ ಮಾತುಗಳಿಗೆ ತಲೆದೂಗ ಬೇಕಾಗಿಲ್ಲ ಅಂಥವರ ಮಾತು ಕೇಳಿ ಕೆಲಸ ಮಾಡಿದರೆ 24 ತಾಸುಗಳಲ್ಲಿ ಅವರನ್ನು ಕ್ಷೇತ್ರದಿಂದ ಓಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಶಾಸಕ ಕೆ ನೇಮಿರಾಜ್ ನಾಯ್ಕ್  ಖಾರವಾಗಿ ಹೇಳಿದರು.
 ಪಟ್ಟಣದ ಹಳೆ ಊರಿನ ಪಾಪ ಸ್ವಾಮಿ ಶಾಲೆಯ ಆವರಣದಲ್ಲಿ ಪುರಸಭೆಯಿಂದ ಏರ್ಪಡಿಸಿದ್ದ ಬೈಲ್ ಪತ್ತಾರ್ ಸಮುದಾಯದ ಬಡ  ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿವೇಶನಕ್ಕಾಗಿ ಬಡ ಕುಟುಂಬಗಳು  20 ರಿಂದ 30 ಸಾವಿರ ಖರ್ಚು ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ 10 ವರ್ಷ  ಪ್ರಜಾಪ್ರಭುತ್ವ ಕಗ್ಗೊಲೆಯಾಗಿತ್ತು. ನನ್ನ ಅವಧಿಯಲ್ಲಿ ಅದಕ್ಕೆ ಅವಕಾಶ ಕೊಡುವುದಿಲ್ಲ ಜನಸಾಮಾನ್ಯರಿಗೆ ನ್ಯಾಯ ನೀಡುವಂತಹ ಕೆಲಸವಾಗಬೇಕು. ಸರ್ಕಾರ ಸಂಬಳ ನೀಡುವುದು ಜನರ ಕೆಲಸ ಮಾಡಲಿಕ್ಕೆ. ಯಾರದೋ ಖಾಸಗಿ ವ್ಯಕ್ತಿಗಳ ಕೆಲಸ ಮಾಡುವುದಾಗಿದ್ದರೆ. ಅಂತಹ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲಾಗುವುದು.
 ಬಹಳ ವರ್ಷದಿಂದ ಬೈಲ್ ಪತ್ತಾರ ಸಮುದಾಯದ ಬಡ ಕುಟುಂಬಗಳು ಟೆಂಟ್ ಹಾಕಿಕೊಂಡು ಬಿಸಿಲು ಮಳೆಯಲ್ಲಿ ವಾಸಿಸುತ್ತಿದ್ದರು. ಅವರು ನಿವೇಶನಕ್ಕಾಗಿ ಅನೇಕ ಬಾರಿ ಅರ್ಜಿ ನೀಡಿದ್ದಾರೆ. ಕೆಲವರು ಇದರಲ್ಲಿ ಲಾಭ ಪಡೆಯುವ ಹುನ್ನಾರ ನಡೆಸಿದ್ದಾರೆ. ಅಂಥವರಿಗೆ ಅವಕಾಶ ನೀಡದೆ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುತ್ತಿದ್ದೇವೆ ಎಂದರು.
 ಸುಮಾರು 48 ಬಡ ಕುಟುಂಬದವರಿಗೆ ಹಕ್ಕು  ಪತ್ರಗಳನ್ನು ನೀಡಲಾಯಿತು. ಹಕ್ಕು ಪತ್ರ ಪಡೆದ ಕುಟುಂಬಗಳು ಬಹಳ ದಿನದ ಕನಸು ನನಸಾಗಿದ್ದಕ್ಕೆ ಭಾವುಕರಾದರು..
 ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ನಾಗರಾಜ್ ಜನ್ನು, ದೀಪಕ್ ಕಠಾರಿ, ಅಂಬಳಿ ಮಂಗಳ  ಎಚ್ ಎಂ ಚೆನ್ನಮ್ಮ, ಮಾಜಿ ಸದಸ್ಯ ಬದಾಮಿ ಮೃತ್ಯುಂಜಯ, ಚಿತ್ವಾಡಗಿ ಪ್ರಕಾಶ್, ಹೋಟೆಲ್ ಸಿದ್ದರಾಜು, ಈ ಕೆ ಕೃಷ್ಣಮೂರ್ತಿ, ರಾಮರೆಡ್ಡಿ, ಪಾಂಡು ನಾಯ್ಕ್, ಅಂಬಣ್ಣ ಗಜೇಂದ್ರ ಮಂಜುನಾಥ ಪವಾಡಿ ನಾಣ್ಯಪುರ ಕೃಷ್ಣಮೂರ್ತಿ  ಪುರಸಭೆಯ ಮುಖ್ಯಾಧಿಕಾರಿ ಪ್ರಭಾಕರ್ ಪಾಟೀಲ್, ಕಂದಾಯ ಅಧಿಕಾರಿ ಮಾರೆಪ್ಪ, ವ್ಯವಸ್ಥಾಪಕ ಚಂದ್ರಶೇಖರ್, ಹಾಗೂ ಪುರಸಭೆ ಸಿಬ್ಬಂದಿ ಹಾಜರಿದ್ದರು