ಪಟ್ಟದ್ದೇವರ ಶೈಕ್ಷಣಿಕ ಕಾಳಜಿ ಮಾದರಿ

ಭಾಲ್ಕಿ:ಸೆ.21: ಮಕ್ಕಳ ಸವಾರ್ಂಗೀಣ ಪ್ರಗತಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವೆಂದರಿತು ಡಾ.ಬಸವಲಿಂಗ ಪಟ್ಟದ್ದೇವರು ವಿದ್ಯಾ ದೇಗುಲ ತೆರೆದು ಜಾತಿಮತ ಭೇದ ಇಲ್ಲದೇ ಎಲ್ಲ ವರ್ಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುತ್ತಿರುವುದು ಮಾದರಿ ಎನಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜ್ಞಾನೇಶ್ವರ ನಿರಗೂಡೆ ಹೇಳಿದರು.

ತಾಲೂಕಿನ ಕಾಸರ ತೂಗಾಂವ ಗ್ರಾಮದ ಅಲ್ಲಮ್ಮಪ್ರಭು ಗುರುಕುಲ ಪ್ರಾಥಮಿಕ ಶ್ರೀಮತಿ ಎಸ್.ಎಸ್.ಬಿ ಪ್ರೌಢ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗಡಿಯಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು ಧರ್ಮ ಪ್ರಚಾರ ಪ್ರಸಾರದ ಜತೆಗೆ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ. ಬಡವರು, ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಿ ಸಮಾಜದ ಪ್ರಜ್ಞಾವಂತ ನಾಗರಿಕರನ್ನಾಗಿ ಬೆಳೆಸುತ್ತಿರುವುದು ಮೌಲ್ಯಯುತ ಕಾರ್ಯ ಎಂದು ಬಣ್ಣಿಸಿದರು.

ಸಾನ್ನಿಧ್ಯ ವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ಅದ್ಭುತ ಪ್ರತಿಭೆ ಇದೆ. ಅದನ್ನು ಗುರುತಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ನೇತೃತ್ವ ವಹಿಸಿದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಗಡಿ ಭಾಗದ ಮಕ್ಕಳ ಬಗ್ಗೆ ಡಾ.ಬಸವಲಿಂಗ ಪಟ್ಟದ್ದೇವರು ವಿಶೇಷ ಕಾಳಜಿ ಹೊಂದಿದ್ದಾರೆ. ಶಿಕ್ಷಣದಿಂದ ಯಾರೊಬ್ಬರು ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ತೆರೆದು ಗುಣಾತ್ಮಕ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲ್ಪಿಸಿ ಕೊಡುತ್ತಿದ್ದಾರೆ.

ಬಡ ವಿದ್ಯಾರ್ಥಿನಿ ಗಾಯತ್ರಿ ರಾಜಕುಮಾರ ಎಂಬುವರಿಗೆ 1 ರಿಂದ ಪಿಯುಸಿ ವರೆಗೂ ಪೂಜ್ಯರು ಉಚಿತ ಶಿಕ್ಷಣ ಕಲ್ಪಿಸಿದ್ದಾರೆ. ಇದೀಗ ಈ ವಿದ್ಯಾರ್ಥಿನಿ ಸರಕಾರಿ ಕೋಟಾದಡಿ ಮೆಡಿಕಲ್ ಸೀಟು ಪಡೆದಿರುವುದು ಹೆಮ್ಮೆ ತರಿಸಿದೆ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿದ ಮೆಡಿಕಲ್ ವಿದ್ಯಾರ್ಥಿನಿ ಗಾಯತ್ರಿ ರಾಜಕುಮಾರ ಮಾತನಾಡಿ, ಡಾ.ಬಸವಲಿಂಗ ಪಟ್ಟದ್ದೇವರು ನನ್ನಂತಹ ನೂರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕಲ್ಪಿಸಿದ್ದಾರೆ. ಅದರಲ್ಲಿ ನಾನೂ ಕೂಡ ಒಬ್ಬಳಾಗಿದ್ದೇನೆ. ಶ್ರೀಗಳ ಆಶೀರ್ವಾದಿಂದ ನಾನು ವೈದ್ಯಕೀಯ ಕ್ಷೇತ್ರ ಪ್ರವೇಶಿಸಲು ಸಾಧ್ಯವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಗ್ರಾಮ ಪಾಟೀಲ್ ದಂಪತಿ ಬಸವ ಗುರುವಿನ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಾಚಾರ್ಯ ಅಶೋಕ ರಾಜೋಳೆ, ಪ್ರಮುಖರಾದ ವಸಂತ ಮಾನೂರೆ, ಶಿವರಾಜ ಪಾಟೀಲ್, ಮಲ್ಲಿಕಾರ್ಜುನ ಬಿರಾದಾರ್, ಶಿವಕುಮಾರ ಪಾಟೀಲ್, ಖಂಡುದಾಸ ಪವಾರ್, ದೇವಿದಾಸ ಪಾಟೀಲ್ ಸೇರಿದಂತೆ ಹಲವರು ಇದ್ದರು.

ಜೈರಾಜ ಧುಮ್ಮನಸೂರೆ ಸ್ವಾಗತಿಸಿದರು.ಮಲ್ಲಿಕಾರ್ಜುನ ಪಾಟೀಲ್ ನಿರೂಪಿಸಿದರು. ಶಿವಪುತ್ರ ಸ್ವಾಮಿ ವಂದಿಸಿದರು.

ಸನ್ಮಾನ :
ಇದೇ ವೇಳೆ ಸರಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿನಿ ಗಾಯತ್ರಿ ರಾಜಕುಮಾರ ಶಿಂಧೆ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿನಿ ಗಾಯತ್ರಿ ಸೋಮನಾಥ ಅವರನ್ನ ಉಭಯ ಶ್ರೀಗಳು ಸನ್ಮಾನಿಸಿ, ಅಭಿನಂದಿಸಿದರು.