ಪಟ್ಟದ್ದೇವರ ವಾಣಿ ಆಲಿಸಿ, ಬದುಕು ಸಾರ್ಥಕತೆ ಪಡಿಸಿಕೊಳ್ಳಲು ಸಲಹೆ

ಭಾಲ್ಕಿ:ಆ.3:ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು ತಿಂಗಳ ಪಯರ್ಂತ ನಡೆಸಿಕೊಡಲಿರುವ ಪ್ರವಚನವನ್ನು ಭಕ್ತರು ಆಲಿಸಿ ತಮ್ಮ ಬದುಕು ಸಾರ್ಥಕತೆ ಪಡಿಸಿಕೊಳ್ಳಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಗಭೂಷಣ ಮಾಮಡಿ ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಬುಧವಾರ ಆನಂದ ಜೀವನಕ್ಕೆ ಶರಣ ಮಾರ್ಗ ಪ್ರವಚನದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಇಡೀ ಬದುಕು ಸಮಾಜದ ಒಳಿತಿಗೆ ಸಮರ್ಪಿಸಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮ ಕ್ಷೇತ್ರದ ಸೇವೆ ಮೂಲಕ ಈ ಭಾಗದ ಸುಧಾರಣೆಗೆ ನಿರಂತರವಾಗಿ ದಣಿವರಿಯದೆ ದುಡಿಯುತ್ತಿದ್ದಾರೆ.

ಕಳೆದ 40ವರ್ಷಗಳಿಂದ ಪೂಜ್ಯರು ಶ್ರಾವಣ ಮಾಸದಲ್ಲಿ ನಿರಂತರವಾಗಿ ಪ್ರವಚನ ನೀಡುವ ಮೂಲಕ ಜನತೆಗೆ ಜ್ಞಾನದ ದಾಸೋಹ ನೀಡುತ್ತಿದ್ದಾರೆ.

ಈ ವರ್ಷವೂ ಶ್ರಾವಣ ಮಾಸದ ಅಂಗವಾಗಿ ಪೂಜ್ಯರು ಪಟ್ಟಣದ ಚನ್ನಬಸವಾಶ್ರಮದಲ್ಲಿ ಆ.16ರಿಂದ ಆನಂದ ಜೀವನಕ್ಕೆ ಶರಣ ಮಾರ್ಗ ವಿಷಯದ ಮೇಲೆ ಪ್ರವಚನ ನೀಡುತ್ತಿದ್ದು ಭಕ್ತರು ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.

ನೇತೃತ್ವದ ವಹಿಸಿದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಡಾ.ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಶ್ರಾವಣ ಮಾಸದ ನಿಮಿತ್ತ ಆ.16 ರಿಂದ ಸೆ.16ರ ವರೆಗೆ ಜಿಲ್ಲೆಯ ಇಪ್ಪತ್ತೈದು ಕಡೆ ಸೇರಿ ನೆರೆಯ ರಾಜ್ಯದ ಹೈದರಾಬಾದ್ ನಲ್ಲಿ ಪ್ರವಚನ ಏರ್ಪಡಿಸಲಾಗಿದೆ. ಭಕ್ತರು ತಮ್ಮ ಕಾಯಕದ ನಡುವೆ ಬಿಡುವು ಮಾಡಿಕೊಂಡು ಪ್ರವಚನ ಆಲಿಸಿ ನೆಮ್ಮದಿಯ ಜೀವನ ತಮ್ಮದಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಇಂದಿನ ಧಾವಂತದ ಬದುಕಿನಲ್ಲಿ ಯಾರೊಬ್ಬರಿಗೂ ನೆಮ್ಮದಿ, ಸಮಾಧಾನ ಇಲ್ಲದಂತಾಗಿದೆ. ಒತ್ತಡಕ್ಕೆ ಸಿಲುಕಿ ಮನುಷ್ಯ ಅನೇಕ ರೋಗಳಿಗೆ ತುತ್ತಾಗುತ್ತಿದ್ದಾನೆ. ಪ್ರೀತಿ, ಕರುಣೆ, ಮಮತೆ ಮಾಯವಾಗಿದೆ. ಇದನ್ನು ಮರಳಿ ಪಡೆಯುವುದು ಸೇರಿ ಉತ್ತಮ ವ್ಯಕ್ತಿತ್ವ ರೂಪಗೊಳ್ಳ್ಳಬೇಕಾದರೆ ಪ್ರತಿಯೊಬ್ಬರು ಸತ್ಸಂಗ, ಪ್ರವಚನ, ಶರಣರ ವಾಣಿ ಆಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಶ್ರಾವಣ ಮಾಸದ ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ವಿದ್ಯಾವತಿ ಸೋಮನಾಥಪ್ಪ ಅಷ್ಟೂರೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ಧಾಬಶೆಟ್ಟಿ, ಪ್ರಥಮ ದರ್ಜೆ ಗುತ್ತಿಗೆದಾರ ಸಂಗಮೇಶ ಹುಣಜೆ ಮದಕಟ್ಟಿ, ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿ ದೇವೀಂದ್ರ ಕರಂಜೆ, ಸಾಹಿತಿ ರಾಜು ಜುಬರೆ ಇದ್ದರು.