ಪಟ್ಟಣ ವ್ಯಾಪ್ತಿಗೆ ಪ್ರತ್ಯೇಕವಾಗಿ ವಾರ್ ರೂಮ್ ಸ್ಥಾಪನೆ: ಕೆ.ಮಹದೇವ್‍

ಪಿರಿಯಾಪಟ್ಟಣ: ಮೇ.27: ಪಟ್ಟಣದ ಪುರಸಭೆ ಕಚೇರಿಯಲ್ಲಿ ಶಾಸಕ ಕೆ.ಮಹದೇವ್ ಅಧಿಕಾರಿಗಳ ತುರ್ತು ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕರು ಈಗಾಗಲೇ ಪಟ್ಟಣ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪುರಸಭೆ ಸಿಬ್ಬಂದಿ ಮನೆ ಮನೆ ಸರ್ವೆ ಕಾರ್ಯ ನಡೆಸುತ್ತಿದ್ದರೂ ಸಹ ಗುರುವಾರದಿಂದ ಅವರೊಂದಿಗೆ ಆಶಾ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಜತೆಗೂಡಿ ಮನೆಯಲ್ಲಿನ ಸದಸ್ಯರ ಮಾಹಿತಿ ಹಾಗೂ ಅವರ ಆರೋಗ್ಯ ಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ವರದಿ ನೀಡುವಂತೆ ತಿಳಿಸಿ ಸೋಂಕು ಹೆಚ್ಚಳವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಒಟ್ಟಿಗೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು, ಪಟ್ಟಣ ವ್ಯಾಪ್ತಿಯ ಎಲ್ಲಾ 23 ವಾರ್ಡ್ ಗಳಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪಟ್ಟಣ ವ್ಯಾಪ್ತಿಗೆ ಪ್ರತ್ಯೇಕವಾಗಿ ವಾರ್ ರೂಮ್ ಸ್ಥಾಪಿಸುವಂತೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜೆ.ಶ್ರೀನಿವಾಸ್ ಅವರಿಗೆ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಗ್ರಾಮಾಂತರ ಪ್ರದೇಶಗಳಂತೆ ಪಟ್ಟಣ ವ್ಯಾಪ್ತಿಯಲ್ಲಿಯೂ ಸಹ ಪ್ರತಿ ಮನೆ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ ಸಂದರ್ಭ ಸೋಂಕಿನ ಲಕ್ಷಣ ಉಳ್ಳವರಿಗೆ ಮೆಡಿಸಿನ್ ಕಿಟ್ ಗಳನ್ನು ವಿತರಿಸಲಿದ್ದಾರೆ, ಬ್ಲಾಕ್ ಫಂಗಸ್ ಹೆಚ್ಚಾಗಿ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆ ಇದ್ದವರಲ್ಲಿ ಕಾಣಿಸಿಕೊಳ್ಳುತ್ತಿದ್ದು ಅಂತಹ ಸೋಂಕಿತರ ಬಗ್ಗೆ ಈಗಾಗಲೇ ವಿಶೇಷ ಗಮನಹರಿಸಿ ಔಷಧಿ ವಿತರಿಸಲಾಗುತ್ತಿದೆ ಎಂದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಮನೆ ಮನೆ ಸರ್ವೆ ಕಾರ್ಯ ನಡೆಯುತ್ತಿರುವ ಹಾಗೆಯೇ ಪಟ್ಟಣದಲ್ಲಿಯೂ ಸಹ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಸಹಭಾಗಿತ್ವದಲ್ಲಿ ಸರ್ವೆಕಾರ್ಯ ಕೈಗೊಂಡು ಸೋಂಕಿತರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ ಸೋಂಕಿನ ಕೊಂಡಿ ಕತ್ತರಿಸಬೇಕಿದೆ ಎಂದರು.
ಈ ಸಂದರ್ಭ ತಹಸೀಲ್ದಾರ್ ಕೆ.ಚಂದ್ರಮೌಳಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜೆ ಶ್ರೀನಿವಾಸ್, ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್, ಮುಖ್ಯಾಧಿಕಾರಿ ಎ.ಟಿ ಪ್ರಸನ್ನ ಕುಮಾರ್, ಸದಸ್ಯರಾದ ಪಿ.ಸಿ ಕೃಷ್ಣ, ರವಿ, ಎಡಿಎಲ್‍ಆರ್ ಚಿಕ್ಕಣ್ಣ, ಸರ್ವೇಯರ್ ಎಂ.ಕೆ ಪ್ರಕಾಶ್, ಮುಖಂಡ ಉಮೇಶ್, ಎಇಇ ಸದಾಶಿವಪ್ಪ, ಆರೋಗ್ಯ ನಿರೀಕ್ಷಕರಾದ ಆದರ್ಶ, ಪ್ರದೀಪ್, ಪರಿಸರ ಅಭಿಯಂತರೆ ವೈಶಾಲಿ, ವ್ಯವಸ್ಥಾಪಕ ರೇವಣ್ಣ, ಲೆಕ್ಕಾಧಿಕಾರಿ ಪ್ರದೀಪ್, ಸಿಬ್ಬಂದಿ ಲಕ್ಷ್ಮಿ, ಮಂಜುನಾಥ್, ಜಯರಾಮ್ ಹಾಜರಿದ್ದರು.