ಸಂಜೆವಾಣಿ ವಾರ್ತೆ
ಹನೂರು ಜು.23:- ಪಟ್ಟಣದ 13 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮತ್ತು ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ವಹಿಸುವಂತೆ ಶಾಸಕ ಎಂ.ಆರ್.ಮಂಜುನಾಥ್ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣ ಪಂಚಾಯಿತಿ ಕಛೇರಿ ಸಭಾಂಗಣದಲ್ಲಿ ಕರೆದಿದ್ದ ಅಧಿಕಾರಿಗಳು ಮತ್ತು ಸದಸ್ಯರ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದ ಅವರು ಎಲ್ಲಾ ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ದೂರದಂತೆ ನೋಡಿ ಕೊಳ್ಳಬೇಕು. ಹಾಗೆಯೇ ಸ್ವಚ್ಚತೆ ಬಗ್ಗೆಯೂ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡುವ ಮೂಲಕ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಾಣವಾಗ ಬೇಕಾಗಿದೆ.
ಪಂಚಾಯಿತಿಗೆ ಬರುವ ಸಾವಜನಿಕರ ಕೆಲಸ ಕಾರ್ಯಗಳು ಶೀಘ್ರ ವಿಲೇವರಿ ಆಗಬೇಕು. ಸಿಬ್ಬಂಧಿಗಳ ಕೊರತೆ ಇದ್ದು ಅದನ್ನು ಸರಿದೂಗಿಸಲು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗುವುದು ಹಾಗೂ ಸಧ್ಯದಲ್ಲಿಯೇ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೆ ಸಾರ್ವಜನಿಕರ ಕುಂದು ಕೊರತೆ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು ಸಧ್ಯ ಈಗ ತಲೆ ದೂರಿರುವ ಕುಡಿಯುವ ನೀರಿನ ಸಮಸ್ಯೆ ಮತ್ತು ಸ್ವಚ್ಚತೆ ಬಗ್ಗೆ ಹೆಚ್ಚು ಗಮನ ಹರಿಸುವಂತೆ ತಿಳಿಸಿದರು.
ಇದೇ ವೇಳೆ ಪಟ್ಟಣ ಪಂಚಾಯತಿ ಸದಸ್ಯರು ತಮ್ಮ ವ್ಯಾಪ್ತಿಯ ವಾರ್ಡುಗಳಲ್ಲಿನ ಸ್ವಚ್ಛತೆ ಹಾಗೂ ಮೂಲಭೂತ ಸಮಸ್ಯೆಗಳು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಶಾಸಕರಿಗೆ ದೂರು ನೀಡಿದರು.
ಈ ವೇಳೆ ಪ್ರಭಾರ ತಹಸೀಲ್ದಾರ್ ಧನಂಜಯ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಹೇಶ್ ಕುಮಾರ್, ತಾಲ್ಲೂಕು ವೈಧ್ಯಾಧಿಕಾರಿ ಡಾ.ಪ್ರಕಾಶ್, ಅಭಿಯಂತರ ನಾಗೇಂದ್ರ, ಸಂಘಟನಾಧಿಕಾರಿ ಪರಶಿವಮೂರ್ತಿ ಸೇರಿದಂತೆ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಇನ್ನಿತರರು ಹಾಜರಿದ್ದರು.