ಪಟ್ಟಣ ಗ್ರಾಮದಲ್ಲಿ 110 ಕೆವಿ ವಿದ್ಯುತ್ ಉಪ ಕೇಂದ್ರ ಆರಂಭಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಆಗ್ರಹ

ಕಲಬುರಗಿ,ನ.29-ಕಲಬುರಗಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಪಟ್ಟಣ ಗ್ರಾಮದಲ್ಲಿ 110 ಕೆವಿ ವಿದ್ಯುತ್ ಉಪ ಕೇಂದ್ರ, ಇಲ್ಲೇ ಜೆಸ್ಕಾಂ ಆಡಳಿತದ ಶಾಖಾ ಕಚೇರಿ ಆರಂಭಿಸುವಂತೆ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಇಂದಿಲ್ಲಿ ಜೆಸ್ಕಾಂ ಕಚೇರಿಯಲ್ಲಿ ನಡೆದಿರುವ ಕೆಪಿಟಿಸಿಎಲ್ ಎಂಡಿ ಪಂಕಜ ಕುಮಾರ್ ಪಾಂಡೆ ಹಾಗೂ ಜೆಸ್ಕಾಂ ಎಂಡಿ ಸೇರಿದಂತೆ ಅಧಿಕಾರಿಗಳ ಮಹತ್ವದ ಸಭೆಯಲ್ಲಿ ಆಗ್ರಹಿಸಿ ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.
ಈ ಭಾಗದಲ್ಲಿ ರೈತರ ಹೊಲಗದ್ದೆಯಲ್ಲಿ ನೀರಾವರಿಗೆ ಇರುವಂತಹ ಟಿಸಿಗಳು ಪದೇ ಪದೇ ಸುಡುತ್ತಿವೆ. ಇಲ್ಲಿ 110 ಕೆವಿ ಸಬ್ ಸ್ಟೇಷನ್ ಆದಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ವಿದ್ಯುತ್ ವಿತರಣೆ ಗುಣಮಟ್ಟದ್ದಾಗಲಿದೆ ಎಂದರು.
ಇದಲ್ಲದೆ ಮೇಳಕುಂದಾ ಬಿ ಗ್ರಾಮದಲ್ಲಿಯೂ 110 ಕೆವಿ ವಿದ್ಯುತ್ ಉಪ ಕೇಂದ್ರ ಮಂಜೂರು ಮಾಡಿಕೊಡಬೇಕು, ಈಗಾಗಲೇ ಮಂಜೂರಾಗಿರುವ ಉದನೂರ್ ಗ್ರಾಮದಲ್ಲಿನ 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ಬೇಗನೆ ಮಾಡಿ ಮುಗಿಸಬೇಕು ಎಂದು ಸಭೆಯಲ್ಲಿ ಶಾಸಕರು ಆಗ್ರಹಿಸಿದರು.
ಸಭೆಯಲ್ಲಿ ಪಟ್ಟಣ, ಮೇಳಕುಂದಾ, ಉದನೂರ್ ಗ್ರಾಮದ ರೈತ ಮುಖಂಡರು, ಹಿರಿಯರು ಪಾಲ್ಗೊಂಡು ತಾವು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ಬಗ್ಗೆ ಎಂಡಿ ಪಂಕಜ ಕುಮಾರ್ ಪಾಂಡೆ ಗಮನ ಸೆಳೆದರು.
ಸಭೆಯಲ್ಲಿ ಅಕ್ರಮ ಸಕ್ರಮ ಅವಕಾಶ ಮಾಡಿಕೊಡುವ ಮೂಲಕ ಟೀಸಿಗಳ ಮೇಲೆ ಬೀಳುತ್ತಿರುವ ಹೊರೆ ತಗ್ಗಿಸಬೇಕು ಎಂದು ರೈತರು ಆಗ್ರಹಿಸಿದರು.