
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.04:- ಪಟ್ಟಣದ ದೇವೀರಮ್ಮಣ್ಣಿ ಕೆರೆಯ ಏರಿ ಹಾಗು ಮೈಸೂರು-ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಕಾಗುಂಡಿ ಹಳ್ಳದ ಬಳಿ ತ್ಯಾಜ್ಯಗಳ ತಾಣವಾಗಿ ಮಾರ್ಪಟ್ಟಿದ್ದರೂ ಪುರಸಭಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣಕ್ಕೆ ಹೊರಗಿನಿಂದ ಬರುವ ಪ್ರವಾಸಿಗರಿಗೆ ದೇವೀರಮ್ಮಣ್ಣಿ ಕೆರೆ ಏರಿ ಹಾಗು ಕಾಗುಂಡಿ ಹಳ್ಳದ ಬಳಿ ಅಸಹ್ಯಕರ ತ್ಯಾಜ್ಯದ ದುರ್ವಾಸನೆ ಹಾಗೂ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಅನುಪಯುಕ್ತ ವಸ್ತುಗಳು ಸ್ವಾಗತವನ್ನು ನೀಡುತ್ತದೆ.
ಪಟ್ಟಣದಲ್ಲಿರುವ ಹಳೆಯ ಮನೆಗಳನ್ನು ಕೆಡವಿದ ಮಣ್ಣು, ಕಲ್ಲುಗಳು, ಹೆಂಚು, ಕಲ್ನಾರು ಶೀಟುಗಳು, ಹದಿತೆಗೆಯುವಾಗ ಸಿಗುವ ದಪ್ಪ ಕಲ್ಲುಗಳು, ಕೊಳೆತ ತರಕಾರಿ, ಕೋಳಿ ತ್ಯಾಜ್ಯ, ಹಳೆಯ ಬಟ್ಟೆಗಳ ಗಂಟು, ಹಳೆಯ ಸಿಮೆಂಟ್ ಚೀಲಗಳು, ಪ್ಲಾಸ್ಟಿಕ್ ಸಾಮಗ್ರಿಗಳು ಹೋಟೆಲ್ ತ್ಯಾಜ್ಯಗಳು ಸೇರಿದಂತೆ ಹಲವಾರು ನಿರುಪಯುಕ್ತ ವಸ್ತುಗಳನ್ನು ಸಾಲು ಸಾಲಾಗಿ ತಂದು ಸುರಿಯಲಾಗಿದೆ.
ನಾನಾ ರೀತಿಯ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದರೂ ಪುರಸಭೆಯ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪ್ರತಿದಿನ ಸಾವಿರಾರು ಸಂಖ್ಯೆಯ ವಾಹನಗಳು ಈ ಎರಡೂ ರಸ್ತೆಯಲ್ಲಿ ಚಲಿಸುವ ಕಾರಣ ತ್ಯಾಜ್ಯ ನೋಡುಗರಿಗೆ ಅಸಹ್ಯ ಹುಟ್ಟಿಸುವಂತಿದೆ. ಸಾಲುಸಾಲು ತ್ಯಾಜ್ಯದ ರಾಶಿಗಳು ವಾಹನ ಸವಾರರ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಕೆರೆಯ ಏರಿಗೆ ವಿದ್ಯುತ್ ದೀಪ ಅಳವಡಿಸಿ.
ದೇವೀರಮ್ಮಣ್ಣಿ ಕೆರೆಯ ಏರಿಯು ಒಂದು ಕಿಲೋಮೀಟರ್ ಉದ್ದವಿದ್ದು ರಾತ್ರಿ ವೇಳೆಯಲ್ಲಿ ಸಂಚರಿಸಲು ಬೀದಿ ದೀಪಗಳಿಲ್ಲ. ರಾತ್ರಿ ವೇಳೆ ಕಗ್ಗತ್ತಲಿನಲ್ಲಿ ವಾಹನ ಸವಾರರು ಚಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ತಡೆಗೋಡೆ ನಿರ್ಮಿಸಿ:
ಕೆರೆಯ ಏರಿಯ ಒಂದು ಬದಿಗೆ ತಡೆಗೋಡೆ ಇದ್ದು ಇನ್ನೊಂದು ಬದಿಗೆ ತಡೆಗೋಡೆಯೇ ಇಲ್ಲ. ಇದರಿಂದಾಗಿ ಕಳೆದ 2-3 ವರ್ಷಗಳಿಂದ ಸಾಕಷ್ಟು ಅಪಘಾತಗಳು ಸಂಭವಿಸಿ ಸಾವುನೋವು ಉಂಟಾಗಿವೆ. ಇತ್ತೀಚಿಗೆ ಟ್ರಾಕ್ಟರ್ ಹಾಗೂ ಆಟೋ ಏರಿಯ ಕೆಳಗಿರುವ ಗದ್ದೆಗೆ ಉರುಳಿ ಬಿದ್ದು ಸಾವುನೋವು ಸಂಭವಿಸಿವೆ. ಹೀಗಿದ್ದರೂ ಈ ಬಗ್ಗೆ ಯಾವೊಬ್ಬ ಅಧಿಕಾರಿಗಳು ಕ್ರಮವಹಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕರ ಮದ್ಯಪ್ರವೇಶಕ್ಕೆ ಆಗ್ರಹ:
ಕೂಡಲೇ ಪುರಸಭಾ ಮುಖ್ಯಾಧಿಕಾರಿ ಹಾಗೂ ಅಥವಾ ಸಂಬಂದಿಸಿದವರಿಗೆ ನೂತನ ಶಾಸಕ ಹೆಚ್.ಟಿ.ಮಂಜು ಸೂಚನೆ ನೀಡಿ ಇತಿಹಾಸ ಪ್ರಸಿದ್ದವಾಗಿರುವ ದೇವೀರಮ್ಮಣ್ಣಿ ಕೆರೆಯ ಏರಿ ಹಾಗು ಮೈಸೂರು ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಕಾಗುಂಡಿ ಹಳ್ಳದ ಬಳಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಮುಂದಾಗಬೇಕಿದೆ.