ಪಟ್ಟಣದ ಅಭಿವೃದ್ಧಿಗೆ ಬದ್ಧ-ಪರಬ

ಶಿರಹಟ್ಟಿ,20: ಜಾತಿ, ಮತ ಹಾಗೂ ಪಕ್ಷಭೇದ ಮರೆತು ಪಟ್ಟಣದ ಅಭಿವೃದ್ದಿ ಹಿತದೃಷ್ಟಿಯಿಂದ ಜನತೆ ವಿಶ್ವಾಸದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಂಡು ಪಟ್ಟಣದ ಅಭಿವೃದ್ದಿ ಕಾರ್ಯ ಮಾಡುತ್ತೇನೆ ಎಂದು ನೂತನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪರಮೇಶ ಪರಬ ಹೇಳಿದರು.

ಅವರು ಪಟ್ಟಣದ ವಿದ್ಯಾ ನಗರದ ಸಮಸ್ತ ನಾಗರಿಕರು ಪಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವಾರ್ಡಿನ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪಟ್ಟಣ ಪಂಚಾಯಿತಿಗೆ ನಾನೊಬ್ಬನೇ ಅಧ್ಯಕ್ಷನಾಗಿರದೇ ಎಲ್ಲ ಸದಸ್ಯರೂ ಅಧ್ಯಕ್ಷರಾಗಿರುತ್ತಾರೆ. ಯಾವುದೇ ಭೇದ ಮಾಡದೇ 18 ವಾರ್ಡಗಳ ಅಭಿವೃದ್ದಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಪಟ್ಟಣದ ಸಮಗ್ರ ಅಭಿವೃದ್ದಿಗೆ ಸರ್ವ ಸದಸ್ಯರ ಹಾಗೂ ಸಿಬ್ಬಂದಿಗಳ ಸಹಕಾರ ಅಗತ್ಯ. ಅವರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಹಂತ ಹಂತವಾಗಿ ಪ್ರಾಮಾಣಿಕವಾಗಿ ಅಭಿವೃದ್ದಿ ಕಾರ್ಯ ಮಾಡುತ್ತೇನೆ. ಪ್ರತಿ ವಾರ್ಡಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದರ ಜತೆಗೆ ಜನತೆಯ ಅಶೋತ್ತರಗಳನ್ನು ಈಡೇರಿಸುವ ಮೂಲಕ ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿದರು.

ಶಿರಹಟ್ಟಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಿಂದ ಅಭಿವೃದ್ದಿ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ. ಕೋಟ್ಯಂತರ ರೂ. ಸರ್ಕಾರದ ಅನುದಾನ ಮಾತ್ರ ಖರ್ಚಾಗಿದೆ. ಆದರೆ ಶಾಶ್ವತವಾದ ಪಟ್ಟಣದ ಜನತೆ ನೆನಪಿಡುವ ಗುಣಮಟ್ಟದ ಯಾವುದೇ ಕೆಲಸ ಕಾರ್ಯಗಳು ಆಗಿಲ್ಲ ಎನ್ನುವ ಬಲವಾದ ಆರೋಪ ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಈ ಆರೋಪ ಮುಂದೆ ಕೇಳಿ ಬರದಂತೆ ಕಾಮಗಾರಿ ಮಾಡಿ ತೋರಿಸುವ ಭರವಸೆ ನೀಡಿದರು.
ನಿವೃತ್ತ ಶಿಕ್ಷಕ ಕೆ.ಎ. ಬಳಿಗೇರ ವಿದ್ಯಾ ನಗರದ ಜನತೆಯ ಪರವಾಗಿ ಮತ್ತು ಆ ವಾರ್ಡಿನ ಸಮಸ್ಯೆ ಕುರಿತು ಮನವಿ ಪತ್ರ ನೀಡಿ ಮಾತನಾಡಿ, ಈ ಬಡಾವಣೆಯಲ್ಲಿ ಸಂಪೂರ್ಣ ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಿಸಿದ್ದು, ಚರಂಡಿ ನೀರಿ ಹರಿಯದೇ ಅಲ್ಲಿಯೇ ನಿಲ್ಲುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮೇಲಾಗಿ ಹೆಚ್ಚು ಸುಶಿಕ್ಷಿತರು ವಾಸವಿರುವ ಈ ಬಡಾವಣೆಯಲ್ಲಿಯ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ಸರಿಪಡಿಸಿಕೊಡಬೇಕು ಎಂದರು.

ಈ ಬಡಾವಣೆಯಲ್ಲಿ ಶುದ್ದ ನೀರಿನ ಘಟಕ, ಅಂಗನವಾಡಿ ಕೇಂದ್ರ ಸ್ಥಾಪನೆ ಮಾಡಬೇಕು. ವಿದ್ಯಾ ನಗರ ಬಡಾವಣೆ ಉದಯಿಸಿದಾಗಿನಿಂದಲೂ ಇಲ್ಲಿ ಯಾವುದೇ ದೇವಸ್ಥಾನವಿಲ್ಲದೇ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದು, ದೇವಸ್ಥಾನ ನಿರ್ಮಿಸಿ ಕೊಡಬೇಕು. ಇದೇ ಬಡಾವಣೆಯಲ್ಲಿ ಕ್ರಿಡಾಂಗಣವಿದ್ದು, ನಿತ್ಯ ನೂರಾರು ಯುವಕರು ದ್ವಿಚಕ್ರವಾಹನವನ್ನು ಅತ್ಯಂತ ವೇಗವಾಗಿ ಓಡಿಸುತ್ತಿದ್ದು, ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ತುರ್ತು ಅಲ್ಲಲ್ಲಿ ಹಂಪ್ಸ್ ನಿರ್ಮಿಸಿ ಕೊಡಬೇಕು. ವಿದ್ಯುತ್ ವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿ ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು.

ಪಪಂ ಉಪಾಧ್ಯಕ್ಷ ಇಸಾಕ ಅಹ್ಮದ ಆದ್ರಳ್ಳಿ, ವಾರ್ಡಿನ ಸದಸ್ಯ ಹೊನ್ನಪ್ಪ ಶಿರಹಟ್ಟಿ ಅವರನ್ನು ಸನ್ಮಾನಿಸಲಾಯಿತು. ಡಿ.ಎಚ್. ಸರಖವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವೈ.ಎಸ್. ಪಾಟೀಲ, ಎಸ್.ಎಸ್. ಹಿರೇಮಠ, ಎಂ.ಕೆ. ದ್ಯಾವನೂರ, ಎಸ್.ಎಸ್. ಮಳ್ಳಣ್ಣವರ, ಎಸ್.ಡಿ. ಕಡ್ಲಿಕೊಪ್ಪ, ಚಂದ್ರಕಾಂತ ಅಕ್ಕಿ, ಸುರೇಶ ಸರ್ಜಾಪೂರ, ಶರಣಪ್ಪ ಪಾಪನೂರ, ಎಸ್.ಬಿ. ಹೊಸೂರ, ಭರಮಪ್ಪ ಸ್ವಾಮಿ, ಎಸ್.ಎಸ್. ಪಾಟೀಲ, ಪರಸಪ್ಪ ಸ್ವಾಮಿ, ಎಂ.ಎ. ಬುಕ್ಕಿಟಗಾರ, ಕಾಶಪ್ಪ ಸ್ವಾಮಿ, ಮಲ್ಲಿಕಾರ್ಜುನ ಹಿರೇಮಠ, ಎಸ್.ಎಚ್. ಭಜಂತ್ರಿ ಇತರರು ಇದ್ದರು.