ಪಟ್ಟಣದಲ್ಲೆ ನಗರ ಯೋಜನಾ ಇಲಾಖೆ ಕಛೇರಿಗೆ ಕ್ರಮ-ಬಳ್ಳಾರಿ

ಬ್ಯಾಡಗಿ,ಡಿ20: ರಸ್ತೆಗಳ ವಿಸ್ತೀರ್ಣ ಗೊತ್ತಿಲ್ಲದ್ದರಿಂದ ಕೆಲವೆಡೆ ಕಟ್ಟಡಗಳ ಪರವಾನಿಗೆ ನೀಡಲು ಪುರಸಭೆಗೆ ತೊಂದರೆಯಾಗುತ್ತಿದೆ, ಬರುವ ಜನವರಿಯಿಂದ ಪಟ್ಟಣದಲ್ಲೇ ನಗರ ಯೋಜನಾ ಇಲಾಖೆ ಕಛೇರಿ (ಟೌನ್ ಪ್ಲಾನಿಂಗ್ ಆಫೀಸ್) ಕಾರ್ಯ ನಿರ್ವ ಹಿಸಲು ಕ್ರಮಕೈಗೊಳ್ಳುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೋಮವಾರ ಜರುಗಿದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ತಿಳಿಸಿದರು.
ವಿಷಯದ ಕುರಿತು ಸಭೆಯ ಗಮನ ಸೆಳೆದ ಸದಸ್ಯ ಬಸವರಾಜ ಛತ್ರದ, ಮುಖ್ಯರಸ್ತೆ, ರಟ್ಟೀಹಳ್ಳಿ ರಸ್ತೆ, ಹಂಸಭಾವಿ ರಸ್ತೆ ಮಲ್ಲೂರ ರಸ್ತೆ, ಮೋಟೆಬೆನ್ನೂರ ರಸ್ತೆಗಳಿಗೆ ಹೊಂದಿಕೊಂಡು ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿ ಮನೆ ಅಥವಾ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಳ್ಳುವವರಿಗೆ ಪುರಸಭೆಯಿಂದ ಅನುಮತಿ ನೀಡದೇ ಸಕ್ಷಮ ಪ್ರಾಧಿಕಾರದಿಂದ ನಿರಪೇ ಕ್ಷಣಾ ಪತ್ರಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ, ಇದಕ್ಕಾಗಿ ಲೋಕೊಪಯೋಗಿ ಇಲಾಖೆ ಕಛೇರಿಗೆ ಹೋದರೆ ರಸ್ತೆ ಮದ್ಯಭಾಗದಿಂದ 126 ಅಡಿಗಳಷ್ಟು ಜಾಗಬಿಟ್ಟು ಕಟ್ಟಡ ನಿರ್ಮಿಸಿಕೊಳ್ಳುವಂತೆ ಹೇಳುತ್ತಿದ್ದಾರೆ, ಸಾರ್ವಜನಿಕರ ಹಿತಾಸಕ್ತಿ ಉದ್ದೇಶದಿಂದ ಸದರಿ ಟೌನ್ ಪ್ಲಾನಿಂಗ್ ಕಛೇರಿಯನ್ನು ಶೀಘ್ರದಲ್ಲೇ ಆರಂಭಿಸುವಂತೆ ಆಗ್ರಹಿಸಿದರು.
ಬಸವೇಶ್ವರ ನಗರ ಸಮಸ್ಯೆ ಪರಿಹರಿಸಿ:ಸದಸ್ಯ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಪಟ್ಟಣದ ಬಸವೇಶ್ವರ ನಗರದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ವಾಸವಿದ್ದ ಜನರಿಗೆ ಮನೆಯ ಮಾಲೀಕತ್ವ ಸಿಗದಂತಾಗಿದೆ, ಹಿಂದಿನ ಸರ್ಕಾರದಲ್ಲಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಲ್ಲಿನ ಜನರಿಗೆ ಮಾಲೀಕತ್ವ ಸಿಗದಂತಾಗಿದೆ, ಇದೀಗ ಸರ್ಕಾರ ನಿರ್ಧರಿಸಿದ ಹಣಕೊಟ್ಟು ಪಡೆದುಕೊಳ್ಳಲು ಸಿದ್ಧರಿದ್ದರೂ ಒಪ್ಪಿಗೆ ಸೂಚಿಸುತ್ತಿಲ್ಲ ಕೂಡಲೇ ಸಮಸ್ಯೆಗೆ ಶಾಶ್ವತ ಪರಿ ಹಾರ ನೀಡುವಂತೆ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಬಿಜಾಪುರ ನಗರದಲ್ಲಿ ಮಾಡಿದಂತೆ ಪಟ್ಟಣದ ಬಸವೇಶ್ವರ ನಗರದ ಸಮಸ್ಯೆ ಇತ್ಯಥ್ರ್ಯಪಡಿಸಿಲು ನಿರ್ಧರಿಸಿದ್ದೇವೆ, ಮತ್ತೊಮ್ಮೆ ಕ್ಯಾಬಿನೆಟ್ ಅನುಮತಿ ಪಡೆಯಬೇಕಾಗಿದ್ದು ಮುಂದಿನ ಸಚಿವ ಸಂಪುಟದಲ್ಲಿ ಪ್ರಕರಣವನ್ನಿಟ್ಟು ಅನುಮತಿ ಪಡೆದುಕೊಳ್ಳುವುದಾಗಿ ತಿಳಿಸಿದರು.
ಸದಸ್ಯ ವಿನಾಯಕ್ ಹಿರೇಮಠ ಮಾತನಾಡಿ, ಅಧಿಕಾರಿಗಳು ಮಾಡಿದ ತಪ್ಪಿಗೆ ತಾಲೂಕ ಮಟ್ಟದ ಗುರುಭವನ ಕಾಮಗಾರಿ ತಾಂತ್ರಿಕ ಕಾರಣಗಳಿಂದ ನೆನೆಗುದಿಗೆ ಬಿದ್ದಿದೆ,ಇದರಿಂದ ತಾಲೂಕಿನ ಶಿಕ್ಷಕರ ಬಳಗದ ಬಹುದಿನದ ಕನಸು ಹಾಗೆಯೇ ಉಳಿದಿದ್ದು ಕೂಡಲೇ ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸಭೆಯಲ್ಲಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಕೊರೋನಾ ಇದ್ದುದರಿಂದ ವಿಳಂಬವಾಗಿದ್ದು ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ತಿಳಿಸಿದರು.
ಸದಸ್ಯ ಈರಣ್ಣ ಬಣಕಾರ ಮಾತನಾಡಿ, ಹಿಂದೆ ಮಾಡಿದ್ದ ಆಶ್ರಯ ಸಮಿತಿಯ ಲೀಸ್ಟ್‍ನಲ್ಲಿ ಸಾಕಷ್ಟು ಲೋಪದೋಷಗಳಿವೆ, ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಅಷ್ಟಕ್ಕೂ 1.5 ಲಕ್ಷ ರೂ.ಗಳನ್ನು ತುಂಬಿ ‘ಜಿ’ಪ್ಲಸ್1 ಮನೆಯನ್ನು ಪಡೆದುಕೊಳ್ಳಲು ಸಿದ್ಧರಿಲ್ಲ ಆದ್ದರಿಂದ ಸಾಧ್ಯವಾದಷ್ಟು ಬೇರೆಡೆ ಜಾಗವನ್ನು ಪಡೆದು ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಉಚಿತವಾಗಿ ನಿವೇಶನ ನೀಡುವಂತೆ ಆಗ್ರಹಿಸಿದರು.
ಒಳಚರಂಡಿ ಸಮರ್ಪಕವಾಗಿ ನಿರ್ಮಿಸಲಿ: ಸದಸ್ಯ ಶಿವರಾಜ ಅಂಗಡಿ ಮಾತನಾಡಿ, ಪಟ್ಟಣದಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ, ಜನರಿಗೆ ಅನುಕೂಲವಾಗಬೇಕಿದ್ದ ಯೋಜನೆಯೊಂದು ತಲೆನೋವಾಗಿ ಪರಿಣಮಿಸಿದ್ದು ಕೂಡಲೇ ಗುತ್ತಿಗೆದಾರರನ್ನು ಮತ್ತು ಅಧಿಕಾರಿಗಳನ್ನು ಬಿಗಿಗೊಳಿಸಿ ಕೂಡಲೇ ಸಮರ್ಪಕವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಗ್ರಹಿಸಿದರು. ಇದಕ್ಕೂ ಮುನ್ನ ಪುರಸಭೆ ವಿಷಯಗಳು ಅಧಿಕಾರದ ಗೌರವ ಮತ್ತು ಗೌಪ್ಯತೆಗಳ ಕುರಿತು ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು..
ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಛಲವಾದಿ, ಮಂಜಣ್ಣ ಬಾರ್ಕಿ, ಜಮೀಲಾ ಹೆರ್ಕಲ್, ಸುಭಾಸ್ ಮಾಳಗಿ, ಸರೋಜಾ ಉಳ್ಳಾಗಡ್ಡಿ, ಮೆಹಬೂಬ್ ಅಗಸನಹಳ್ಳಿ, ಗಾಯತ್ರಿ ರಾಯ್ಕರ್, ಹನುಮಂತ ಮ್ಯಾಗೇರಿ, ಚಂದ್ರಣ್ಣ ಶೆಟ್ಟರ, ಮಲ್ಲವ್ವ ಪಾಟೀಲ, ಮಂಗಳ ಗೆಜ್ಜೆಳ್ಳಿ, ಕಮಲವ್ವ ಕುರಕುಂದಿ, ಮಹ್ಮದ್ ರಫೀಕ್ ಮುದಗಲ್, ರೇಷ್ಮಾಬಾನು ಶೇಖ್, ಸಂಜೀವ ಮಡಿವಾಳರ, ಗಣೇಶ ಅಚಲಕರ, ಗಿರಿಜಾ ಪಟ್ಟಣಶೆಟ್ಟಿ, ಪ್ರೇಮಾ ಬೆನ್ನೂರ, ಹನುಮಂತ ಕೋಡಿಹಳ್ಳಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.