ಪಟ್ಟಣದಲ್ಲಿ ರಸ್ತೆಗಳ ಅವ್ಯವಸ್ಥೆ: ದಸಂಸ ಧರಣಿ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಸೆ.14:- ವರುಣಾ ಮತ್ತು ತಿ.ನರಸೀಪುರ ವಿಧಾನಸಭಾ ಕ್ಷೇತ್ರಗಳಿಗೆ ಒಳಪಡುವ ತಿ.ನರಸೀಪುರ ಪುರಸಭೆ ವ್ಯಾಪ್ತಿಯಲ್ಲಿ 24/7 ಕುಡಿಯುವ ನೀರು ಉದ್ದೇಶಕ್ಕೋಸ್ಕರ ಪಟ್ಟಣದ ಬಹುತೇಕ ರಸ್ತೆಗಳನ್ನು ಅಗೆದಿದ್ದು, ಐದಾರು ವರ್ಷಗಳು ಕಳೆದರೂ ರಸ್ತೆಗಳನ್ನು ದುರಸ್ತಿ ಮಾಡಿಸಿಲ್ಲ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಬಣ) ಧರಣಿ ನಡೆಸಿತು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ನಡೆದ ಧರಣಿಯಲ್ಲಿ 24/7 ಕುಡಿಯುವ ನೀರು ಉದ್ದೇಶಕ್ಕಾಗಿ ತಿ. ನರಸೀಪುರ ಪಟ್ಟಣದ ಪ್ರಮುಖ ರಸ್ತೆಗಳನ್ನು ಅಗೆದು ಇದುವರೆಗೂ ದುರಸ್ಥಿ ಮಾಡಿಸಿರುವುದಿಲ್ಲ.ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳು ಉಂಟಾಗಿದೆ.ವಾಹನ ಚಾಲಕರು ತುಂಬಾ ಕಷ್ಟ ಅನುಭವಿಸಿದ್ದು, ಮಳೆಗಾಲದಲ್ಲಿ ಪಟ್ಟಣದ ಬಹುತೇಕ ಭಾಗ ಕೆಸರುಮಯವಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಧರಣಿ ನಡೆಸಿತು.
ಪುರಸಭೆ ವ್ಯಾಪ್ತಿಯ ಹಲವು ಭಾಗಗಳನ್ನು ಹಾಲಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿನಿಧಿಸುತ್ತಿದ್ದು,ತಿ. ನರಸೀಪುರ ವಿಧಾನ ಸಭಾ ವ್ಯಾಪ್ತಿಯ 24/7 ಕುಡಿಯುವ ನೀರು ಸರಬರಾಜು ಮತ್ತು ಅಗೆದ ರಸ್ತೆಗಳ ದುರಸ್ಥಿಗಾಗಿ ಸರ್ಕಾರ 69 ಕೋಟಿಗಳನ್ನು ಬಿಡುಗಡೆಗೊಳಿಸಿದೆ.ಆದರೂ ಸಂಬಂಧಿಸಿದ ಇಲಾಖೆಯು ಕಾಮಗಾರಿಯನ್ನು ಆರಂಭ ಮಾಡಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ್ ಆರೋಪಿಸಿದರು.
ವರುಣಾ ಕ್ಷೇತ್ರ ವ್ಯಾಪ್ತಿಯ ಅಗೆದ ರಸ್ತೆಗಳ ದುರಸ್ಥಿಗಾಗಿ 248.50ಲಕ್ಷ ರೂಗಳು ಬಿಡುಗಡೆಗೊಂಡಿರುತ್ತದೆ. ಆದರೆ,ಅಧಿಕಾರಿಗಳು ಕೆಲಸ ಪ್ರಾರಂಭಿಸದೆ ಮೀನಾಮೇಷ ಎಣಿಸುತ್ತಿದ್ದಾರೆ.ಪಟ್ಟಣದ ಬಹುಪಾಲು ರಸ್ತೆಗಳು ಗುಂಡಿಮಯವಾಗಿದ್ದು, ವಾಹನ ಚಾಲಕರು ಓಡಾಡಲು ತುಂಬಾ ತೊಂದರೆ ಆಗುತ್ತಿದೆ.ಕೆಲವೊಮ್ಮೆ ವಾಹನ ಚಾಲಕರು ಹಳ್ಳ ಕೊಳ್ಳಗಳನ್ನು ತಪ್ಪಿಸಲು ಹೋಗಿ ಸಾರ್ವಜನಿಕರಿಗೆ ಗುದ್ದಿ ಅಪಘಾತ ಮಾಡಿದ್ದುಂಟು.ರಸ್ತೆಗಳ ಹಳ್ಳಕೊಳ್ಳದಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.
ಹಳೇ ಸೇತುವೆ ಗುಂಡಿಗಳು ಮರಣ ಸದೃಶ:
ಕಾವೇರಿ-ಕಪಿಲಾ ಹಳೇ ಸೇತುವೆಗಳ ರಸ್ತೆಯಲ್ಲಿ ಸಾಕಷ್ಟು ದೊಡ್ಡ ಗಾತ್ರದ ಗುಂಡಿಗಳಿದ್ದು,ಮರಣ ಸದೃಶವಾಗಿವೆ.
ಹಳೇ ಸೇತುವೆ ಮೇಲೆ ಸಂಚರಿಸುವ ಚಾಲಕರು ಬಿದ್ದು ಗಾಯಗೊಂಡಿರುವ ಹಲವು ಘಟನೆಗಳು ನಡೆದಿವೆ.ಮಳೆಗಾಲದಲ್ಲಿ ಸೇತುವೆಗಳ ಹಳ್ಳಗಳಲ್ಲಿ ನೀರು ನಿಂತುಕೊಳ್ಳುವುದರಿಂದ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಅಕಸ್ಮಾತ್ ಸಂಚರಿಸಿದಲ್ಲಿ ಅಪಘಾತ ಕಟ್ಟಿಟ್ಟಬುತ್ತಿ ಎಂದು ಅವರು ಆರೋಪಿಸಿದರು.
ಧರಣಿಯಲ್ಲಿ ತಾಲೂಕು ಸಂಚಾಲಕರಾದ ಸಿಬಿಹುಂಡಿ ಸಿದ್ದರಾಜು, ಅತ್ತಹಳ್ಳಿ ರವಿ,ಬೆಟ್ಟಹಳ್ಳಿ ಕೆಂಪರಾಜು, ಜನಾರ್ಧನ್,ಕೊಡಗಳ್ಳಿ ಪ್ರತಾಪ್,ಮಹಿಳಾ ಮುಖಂಡರಾದ ಶಿವಮ್ಮ, ಸರೋಜಮ್ಮ, ಪುಟ್ಟಮ್ಮಣ್ಣಿ,ಲಕ್ಷ್ಮಮ್ಮ, ಜಯರಾಮು, ರಂಗಸ್ವಾಮಿ,ಅತ್ತಹಳ್ಳಿ ನವೀನ್,ಗಣಗನೂರು ಮಹೇಶ್,ನಗರ್ಲೆ ಪ್ರಕಾಶ್,ಸೋಸಲೆ ನಾರಾಯಣ ಇತರರು ಹಾಜರಿದ್ದರು.