ಪಟ್ಟಣದಲ್ಲಿ ಪ್ರಗತಿಯಲ್ಲಿದ್ದ ಕಾಮಗಾರಿಗಳನ್ನು ಜುಲೈ 21 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಯಲ್ಲಿ ಮರು ಉದ್ಘಾಟನೆ

ಕೆ.ಆರ್.ಪೇಟೆ: ಜು.30:- ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಮಂಜೂರಾಗಿ ಪ್ರಗತಿಯಲ್ಲಿದ್ದ ಕಾಮಗಾರಿಗಳನ್ನು ಜುಲೈ 21 ರಂದು ಪಟ್ಟಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಯಲ್ಲಿ ಮರು ಉದ್ಘಾಟನೆ ಮಾಡಿಸಿ ಮುಖ್ಯಮಂತ್ರಿಗಳನ್ನು ಅಪಮಾನಿಸಿದ್ದೀರಿ. ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಟೀಕಿಸಿದ್ದಾರೆ.
ಆಗಸ್ಟ್ 03 ರ ಸಿದ್ದರಾಮೋತ್ಸವದ ಅಂಗವಾಗಿ ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬೊಮ್ಮಾಯಿಯವರ ಕೈಯಲ್ಲಿ ಪೌತಿ ಖಾತೆ, ಜನನ ಪ್ರಮಾಣ ಪತ್ರ, ಅಂಗಡಿಗಳ ಟ್ರೇಡ್ ಲೈಸೆನ್ಸ್ ಕೊಡಿಸುವುದು, ವೃದ್ದಾಪ್ಯ ವೇತನ, ವಿಧವಾ ವೇತನ ಮಂಜೂರಾತಿ ಪತ್ರಗಳು, ಸಸಿವಿತರಣೆ ಮತ್ತಿತರ ಸಾಮಾನ್ಯ ಕಾರ್ಯ ಯೋಜನೆಗಳ ಮಂಜೂರಾತಿ ಪತ್ರಗಳನ್ನು ಕೊಡಿಸಿ ಮುಖ್ಯಮಂತ್ರಿಗಳನ್ನು ದುರ್ಭಳಕೆ ಮಾಡಿದ್ದೀರಿ ಎಂದು ಸಚಿವರ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಕೆ.ಬಿ.ಚಂದ್ರಶೇಖರ್ ಪಟ್ಟಣದ ಅಭಿವೃದ್ದಿಗೆ 27 ಕೋಟಿ ಹಣ ಬಿಡುಗಡೆ ಮಾಡಿದ್ದು ಕಾಂಗ್ರೆಸ್ ಪಕ್ಷ.ಬೆಂಗಳೂರು-ಜಲಸೂರು 8 ರಾಜ್ಯ ಹೆದ್ದಾರಿ ಯೋಜನೆಗೆ ಹಣ ಬಿಡುಗಡೆ ಮಾಡಿದ್ದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಪಕ್ಷ, ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 1 ಲಕ್ಷ ರೂ ಗಳ ಸಹಾಯಧನ ರಾಜ್ಯದ ಎಲ್ಲಾ 224 ವಿಧಾನ ಸಭಾ ಕ್ಷೇತ್ರಗಳಲ್ಲೂ ಜಾರಿಯಲ್ಲಿದೆ. ಇವೆಲ್ಲವನ್ನೂ ತನ್ನ ಸಾಧನೆಗಳೆಂದು ಸುಳ್ಳು ಹೇಳುವ ಕಿರುಹೊತ್ತಿಗೆ ಮುದ್ರಿಸಿ ಕ್ಷೇತ್ರದ ಜನರನ್ನು ವಂಚಿಸಲು ಹೊರಟಿದ್ದೀರಿ. ಪಟ್ಟಣದ 35 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು ಕಾಂಗ್ರೆಸ್, ತಾಲೂಕಿನ ಹೇಮಗಿರಿ, ಮಂದಗೆರೆ ನಾಲಾ ಆಧುನೀಕರಣ, ಸಂತೇಬಾಚಹಳ್ಳಿ ಏತ ನೀರಾವರಿ ಯೋಜನೆ, ಉಯ್ಗೋನಹಳ್ಳಿ ಬಳಿ 220 ಕೆ.ವಿ ಮೆಗಾ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆ, ವಿಠಲಾಪುರ, ಮುರುಕನಹಳ್ಳಿ ಸೇತುವೆ ನಿರ್ಮಾಣ, ಹೇಮಾವತಿ ನದಿಯ ಹೇಮಗಿರಿ ಸೇತುವೆ, ಕಟ್ಟೇಕ್ಯಾತನಹಳ್ಳಿ ಬಳಿ ಹೇಮಾವತಿ ನದಿ ಸೇತುವೆಗೆ ಅಗತ್ಯ ರಸ್ತೆ ನಿರ್ಮಾಣ ಸೇರಿದಂತೆ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತಿಳಿಸಲು 25 ಪುಸ್ತಕಗಳನ್ನು ಮುದ್ರಿಸಬೇಕಾಗುತ್ತದೆಂದರು.
ಕಮೀಷನ್ ಆಸೆಗೆ ತಾಲೂಕು ಕ್ರೀಡಾಂಗಣ ಬಲಿ: ಪಟ್ಟಣದಲ್ಲಿ ಇರುವುದೊಂದೆ ಸ್ಟೇಡಿಯಂ. ಸಾರ್ವಜನಿಕರ ಬಳಕೆಗೆ ಮೀಸಲಾಗಿದ್ದ ಸ್ಟೇಡಿಯಂನೊಳಗೆ ಕಮೀಷನ್ ಆಸೆಗಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಿ ಕ್ರೀಡಾಂಗಣವನ್ನು ಹಾಳು ಮಾಡಿದ್ದೀರಿ. ಕ್ರೀಡಾ ಸಚಿವರಾಗಿ ನಿಮಗೆ ನಾಚಿಕೆಯಾಗುತ್ತಿಲ್ಲವೆ?. ಯಾರೂ ಬೆರಳೆಣಿಕೆಯ ಜನ ಬಳಸುವ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಬೇರೆ ಕಡೆ ಜಾಗ ಕೊಡಿಸುವ ತಾಕತ್ತು ನಿಮಗಿರಲಿಲ್ಲವೇ? ಎಂದು ಛೇಡಿಸಿದ ಕೆ.ಬಿ.ಸಿ ತಾಲೂಕಿನ ಜನರ ಹಿತದೃಷ್ಠಿಯಿಂದ ನಮ್ಮ ಕುಟುಂಬ ಪಟ್ಟಣದಲ್ಲಿ ಹೈಟೆಕ್ ಖಾಸಗಿ ಆಸ್ಪತ್ರೆ ತೆರೆದಿದೆ. ಜನರ ಅರಿವಿಗಾಗಿ ನಮ್ಮ ಆಸ್ಪತ್ರೆಯಲ್ಲಿ ಸಿಗುವ ಸವಲತ್ತುಗಳ ಫ್ಲೆಕ್ಸ್ ಗಳನ್ನು ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಅಳವಡಿಸಿದ್ದೇವೆ. ನಾವು ಆಸ್ಪತ್ರೆ ತೆರದಿರುವುದನ್ನು ಸಹಿಸಲಾರದ ಸಚಿವ ಕೆ.ಸಿ.ನಾರಾಯಣಗೌಡ ನಮ್ಮ ಆಸ್ಪತ್ರೆಯ ಪ್ರಚಾರದ ಫೆಕ್ಸ್‍ಗಳನ್ನು ಅಧಿಕಾರಿಗಳ ಮೂಲಕ ತೆರವುಗೊಳಿಸುವ ಕೀಳು ಮಟ್ಟಕ್ಕೆ ಹೋಗಿದ್ದಾರೆಂದರು. ತಮ್ಮ ಹುಟ್ಟುಹಬ್ಬದ ಸೀರೆ ಹಂಚಲು ಪಾಂಡವಪುರ ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿದಂತೆ ತಾಲೂಕಿನ ಅಧಿಕಾರಿಗಳನ್ನು ದುರ್ಭಳಕೆ ಮಾಡಿದ್ದಾರೆ. ಸಚಿವರ ಪತ್ನಿಗೂ ಸರ್ಕಾರಿ ಕಾರ್ಯಕ್ರಮಗಳಿಗೂ ಏನು ಸಂಬಂಧ? ಎಂದು ಪ್ರಶ್ನಿಸಿದ ಕೆ.ಬಿಚಂದ್ರಶೇಖರ್ ಸಚಿವ ನಾರಾಯಣಗೌಡರೇ, ಜನ ಎಚ್ಚೆತ್ತಿದ್ದಾರೆ. ಇನ್ನು ಮುಂದೆ ನಿಮ್ಮ ಬಾಂಬೆ ಆಟ ನಮ್ಮ ಜನರ ಮುಂದೆ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ಅಧಿಕಾರಿಗಳಿಗೆ ಎಚ್ಚರಿಕೆ: ಪಾಂಡವಪುರ ಉಪ ವಿಭಾಗಾಧಿಕಾರಿಗಳು ಮತ್ತು ತಾಲೂಕು ದಂಡಾಧಿಕಾರಿಗಳೂ ಸೇರಿದಂತೆ ಬಹುತೇಕ ಅಧಿಕಾರಿಗಳು ಸಚಿವರ ಬಾಲಬುಡಕರಾಗಿದ್ದಾರೆ. ತಹಸೀಲ್ದಾರರು ತಮ್ಮ ಹುದ್ದೆಯ ಘನತೆ ಗೌರವಗಳನ್ನು ಗಾಳಿಗೆ ತೂರಿ ಸಚಿವರ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ತಮ್ಮ ಹುದ್ದೆಯ ಘನತೆ ಗೌರವಗಳನ್ನು ಮೀರಿ ನಡೆದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆಂದು ಕೆ.ಬಿ.ಚಂದ್ರಶೇಖರ್ ಎಚ್ಚರಿಸಿದರು.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃ ದ್ದಿ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಿ.ನಾಗೇಂದ್ರಕುಮಾರ್, ಕಿಕ್ಕೇರಿ ಸುರೇಶ್, ಜಿ.ಪಂ ಮಾಜಿ ಸದಸ್ಯ ಎಲ್.ಕೆ.ದೇವರಾಜು, ಮುಖಂಡರಾದ ಬೂಕನಕೆರೆ ವಿಜಯ ರಾಮೇಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಟಿ.ವೆಂಕಟೇಶ್, ತಾ.ಪಂ ಮಾಜಿ ಸದಸ್ಯ ಸಣ್ಣನಿಂಗೇಗೌಡ, ಎಲ್.ಪಿ.ನಂಜಪ್ಪ, ಕೆಂಪೇಗೌಡ, ಪುರಸಭಾ ಸದಸ್ಯ ಕೆ.ಆರ್.ರವೀಂದ್ರಬಾಬು, ಅಗಸರಹಳ್ಳಿ ಗೋವಿಂದರಾಜು, ಶಿವಣ್ಣ, ಚಂದ್ರೇಗೌಡ, ಆದಿಹಳ್ಳಿ ಮೀನಾಕ್ಷಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು