
ಕೆ.ಆರ್.ನಗರ, ಮೇ.14:- ಸತತ ನಾಲ್ಕು ಚುನಾವಣೆಗಳಿಂದ ಸೋಲನ್ನೇ ಹಾಸು ಹೊದ್ದು ಮಲಗಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಗೆಲುವಿನ ಗೋಲು ಬಾರಿಸಿದ್ದರಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನೂತನ ಶಾಸಕ ಡಿ. ರವಿಶಂಕರ್ ಅವರನ್ನು ಸ್ವಾಗತಿಸಿ ಸಂಭ್ರಮಿಸಿದರು.
ದಾಖಲೆಯ 26,000 ಮತಗಳ ಬಾರಿ ಅಂತರದಲ್ಲಿ ಜಯ ಸಾಧಿಸಿದ ಕಾಂಗ್ರೆಸ್ ಶಾಸಕರನ್ನು ಪಟ್ಟಣದ ಹೊರ ವಲಯದಲ್ಲಿರುವ ಆಧಿಶಕ್ತಿ ತೋಪಮ್ಮನವರ ದೇವಾಲಯದ ಬಳಿ 20 ಸಾವಿರಕ್ಕೂ ಅಧಿಕ ಮಂದಿ ಮುಖಂಡರು ಮತ್ತು ಕಾರ್ಯಕರ್ತರು ಪುಷ್ಪಾರ್ಚನೆ ಮಾಡುವ ಮೂಲಕ ಸಡಗರದಿಂದ ಬರಮಾಡಿಕೊಂಡರು. ಕಾಂಗ್ರೆಸ್ ಪಕ್ಷ ಮತ್ತು ಶಾಸಕ ಡಿ. ರವಿಶಂಕರ್ ಅವರಿಗೆ ಜಯಘೋಷವನ್ನು ಮೊಳಗಿಸಿದ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಂಡು ಮೆರವಣಿಗೆಯ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದರು.
ಪಟ್ಟಣ ಸೇರಿದಂತೆ ಕೆ. ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕುಗಳಿಂದ ಆಗಮಿಸಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರುಗಳು ಗೆಲುವಿನ ಸಂಭ್ರಮಾಚರಣೆ ಮಾಡಿ ಕುಣಿದು ಕುಪ್ಪಳಿಸಿದರು. 4 ಚುನಾವಣೆಗಳಿಂದ ಸತತವಾಗಿ ಸೋಲುತ್ತಿದ್ದ ಪಕ್ಷ ಈ ಬಾರಿ ಜಯಭೇರಿ ಬಾರಿಸಿದ್ದು ಎಲ್ಲರಲ್ಲಿಯೂ ಸಂಭ್ರಮ ಮನೆ ಮಾಡುವಂತೆ ಮಾಡಿತಲ್ಲದೆ ಪಕ್ಷದ ಬಾವುಟ ಹಿಡಿದು ರಾಜ್ಯ ಮತ್ತು ರಾಷ್ಟ್ರ ನಾಯಕರ ಪರವಾಗಿ ಘೋಷಣೆಗಳನ್ನು ಕೂಗಿ ಪಟ ಜಯದ ನಗೆಯಲ್ಲಿ ಎಲ್ಲರೂ ಮಿಂದೆದ್ದರು.
ತಮ್ಮನ್ನು ಭಾರೀ ಬಹುಮತಗಳ ಅಂತರದಿಂದ ಚುನಾಯಿಸಿದ ಕ್ಷೇತ್ರದ ಮತದಾರರಿಗೆ ಕೃತಜ್ಝತೆ ಸಲ್ಲಿಸಿದ ನೂತನ ಶಾಸಕರು ಮುಂದಿನ ದಿನಗಳಲ್ಲಿ ಎಲ್ಲರ ಸಲಹೆ ಮತ್ತು ಸಹಕಾರ ಪಡೆದು ಕ್ಷೇತ್ರದ ಸರ್ವಾಂಗಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುವುದಾಗಿ ಘೋಷಣೆ ಮಾಡಿದರು.