ಪಟಾಕಿ ಸ್ಫೋಟ 10 ಮಂದಿ‌ ಸಾವು

ವಿರುದುನಗರ(ತಮಿಳುನಾಡು), ಫೆ.17: ವಿರುದುನಗರ ಜಿಲ್ಲೆಯ ವೆಂಬಕೊಟ್ಟೈ ಬಳಿಯ ರಾಮುತೇವನಪಟ್ಟಿಯಲ್ಲಿರುವ ಪಟಾಕಿ ಘಟಕದ ವಿನ್ನರ್‌ನಲ್ಲಿ ಇಂದು ಹಠಾತ್ ಸ್ಫೋಟ ಸಂಭವಿಸಿ 10 ಮಂದಿ‌ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಕಾರ್ಮಿಕರನ್ನು ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.


ಈ ಘಟಕವನ್ನು ವಿಜಯ್ ಒಡೆತನದ ಖಾಸಗಿ ಪಟಾಕಿ ಕಾರ್ಖಾನೆ ಎಂದು ಹೇಳಲಾಗಿದ್ದು,ಇದರ ಒಳಗೆ ಸಿಕ್ಕಿಕೊಂಡಿರುವ ಕಾರ್ಮಿಕರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸ್ಫೋಟದ ಬಳಿಕ ಹೊತ್ತಿ ಉರಿಯುತ್ತಿರುವ ಪಟಾಕಿ ತಯಾರಿಕಾ ಕಾರ್ಖಾನೆ ಬೆಂಕಿ ನಂದಿಸಲು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿದ್ದಾರೆ. ಸ್ಫೋಟದ ನಂತರ ಸುಮಾರು 3 ಕಟ್ಟಡಗಳು ನೆಲಸಮವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಫೋಟಕ್ಕೆ ಕಾರಣ ಏನು? ಎಂಬ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.
ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಶಿವಕಾಶಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಅಪಘಾತದ ಸ್ಥಳದಲ್ಲಿ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿದೆ.


ಎಂದಿನಂತೆ ಇಂದು ಸಹ ಕಾರ್ಖಾನೆಗೆ ಆಗಮಿಸಿದ್ದ ಕಾರ್ಮಿಕರು, ತಮ್ಮ ತಮ್ಮ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಔಷಧಿ ಮಿಶ್ರಣದಲ್ಲಿ ಘರ್ಷಣೆ ಉಂಟಾಗಿ ಏಕಾಏಕಿ ಸ್ಫೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಪಟಾಕಿ ಕಾರ್ಖಾನೆಯ ಜೊತೆಗೆ ನಾಲ್ಕು ಕಟ್ಟಡಗಳು ಸಹ ನಾಶವಾಗಿವೆ. ಘಟನೆ ಬಳಿಕ ಸ್ಥಳದಿಂದ ಹಲವರು ಓಡಿ ಹೋಗುತ್ತಿರುವುದು ಕಂಡು ಬಂದಿದೆ. ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ದುರ್ಘಟನೆಯಲ್ಲಿ ಏಳು ಜನರು ಸ್ಥಳದಲ್ಲೇ ಮೃತಪಟ್ಟರೆ, ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಸುದ್ದಿ ತಿಳಿದು ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸಾಮಿ ಮತ್ತು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಸಾಮಾಜಿ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.
ಪಟಾಕಿ ಸ್ಫೋಟ, 4 ಮಂದಿ ಸಾವು:
ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲಿ ಎರಡು ದಿನಗಳ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಪಟಾಕಿ ಸ್ಫೋಟಗೊಂಡ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಬುಂದೇಲ್‌ಖಂಡ್ ಗೌರವ್ ಮಹೋತ್ಸವ ಎಂದು ಕರೆಯಲ್ಪಡುವ ಎರಡು ದಿನಗಳ ಸಾಂಸ್ಕೃತಿಕ ಉತ್ಸವವನ್ನು ನಡೆಸುತ್ತಿದ್ದ ಚಿತ್ರಕೂಟ ಇಂಟರ್ ಕಾಲೇಜಿನಲ್ಲಿ ಈ ದುರಂತ ಘಟನೆ ಸಂಭವಿಸಿದೆ.
ಇನ್ನು ಈ ಘಟನೆಯ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನಿಖೆ ನಡೆಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲು ಸೂಚನೆ ನೀಡಿದ್ದಾರೆ.