ಪಟಾಕಿ ಸಿಡಿಸುವ ಜನತೆಗೆ ಪರಿಸರ ಉಳಿಸಲು ಕರೆ

ಕೋಲಾರ,ನ,೧೫: ಪಟಾಕಿ ಮಳಿಗೆಗಳ ಸಮೀಪವೇ ಜನತೆಗೆ ಪರಿಸರ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದ್ದು, ಜನತೆ ಉತ್ತಮ ಆರೋಗ್ಯದ ದೃಷ್ಟಿಯಿಂದ ಗಿಡನೆಡುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಕರೆ ನೀಡಿದರು.
ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಪರಿಸರ ಪ್ರೇಮಿಗಳ ಬಳಗ ಹಾಗೂ ಸೂರ್ಯಪ್ರಿಯ ಕನ್‌ಸ್ಟ್ರಕ್ಷನ್ ಪ್ರೈ ಲಿಮಿಟೆಡ್, ಭಾರತ್ ಸ್ಕೌಟ್ಸ್‌ಗೈಡ್ಸ್, ಲಯನ್ಸ್ ಕ್ಲಬ್, ರೋಟರಿ ಕೋಲಾರ ನಂದಿನಿ ಸಹಯೋಗದೊಂದಿಗೆ ಸೋಮುವಾರ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ೪ನೇ ವರ್ಷದ ‘ಪಟಾಕಿ ಬಿಡಿ,ಪರಿಸರ ಉಳಿಸಿ’ ಅಭಿಯಾನದಡಿ ಉಚಿತವಾಗಿ ಗಿಡ ನೀಡಿ, ಕಾಲೇಜಿನ ಆವರಣದಲ್ಲಿ ಗಿಡನೆಟ್ಟು ಅವರು ಮಾತನಾಡುತ್ತಿದ್ದರು.
ಪಟಾಕಿ ಸಿಡಿಸುವುದರ ಜತೆಗೆ ಹಸಿರು ಉಳಿಸಲು ಪ್ರೇರಣೆ ನೀಡುವ ನಿಮ್ಮ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಸಾಂಪ್ರದಾಯಿಕವಾಗಿ ಪಟಾಕಿ ಸಿಡಿಸಿ ಸಂಭ್ರಮ ಪಡುವ ನಮ್ಮಿಂದಾದ ಪರಿಸರ ಮಾಲಿನ್ಯ ತಡೆಗೆ ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಕಾಳಜಿ ತೋರೋಣ ಎಂದ ಅವರು ಮಾನವರ ಅಗತ್ಯಗಳಿಗಾಗಿ ಈಗಾಗಲೇ ಸಾಕಷ್ಟು ಹಸಿರು ಮಾಯವಾಗಿದೆ ಎಂದರು.
ಹಿರಿಯ ವಕೀಲ ಕೆ.ವಿ.ಶಂಕರಪ್ಪ ಮಾತನಾಡಿ, ಸರ್ಕಾರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಮಾಡುವ ಬದಲಿಗೆ ಪರಿಸರ ಉಳಿಸುವ ಕೆಲಸ ಮೊದಲು ಮಾಡಬೇಕು ಆಗ ಆಸ್ಪತ್ರೆಗಳ ಅಗತ್ಯತೆ ಬರುವುದಿಲ್ಲ ಎಂದು ಸಲಹೆ ನೀಡಿದರು.
ಪಟಾಕಿ ಸಿಡಿಸುವುದರಿಂದ ಪರಿಸರ ಮಾಲಿನ್ಯ ಖಚಿತ, ಈ ನಿಟ್ಟಿನಲ್ಲಿ ಜನತೆ ದೆಹಲಿಯಲ್ಲಿ ಆಗಿರುವ ವಿಷಗಾಳಿ ಸಮಸ್ಯೆಯನ್ನು ಪರಿಗಣಿಸಿಯಾದರೂ ಪಟಾಕಿ ಸಿಡಿಸುವುದನ್ನು ಬಿಡಲಿ ಎಂದು ಮನವಿ ಮಾಡಿದರು.
ಪರಿಸರ ಪ್ರೇಮಿಗಳ ಬಳಗದ ಮುಖ್ಯಸ್ಥ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ವಿ.ಕೆ.ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಟಾಕಿ ಸಿಡಿಸುವುದು ಶೇ.೪೦ ರಷ್ಟು ಕಡಿಮೆಯಾಗಿದೆ, ಕಳೆದ ನಾಲ್ಕು ವರ್ಷಗಳಿಂದ ಪಟಾಕಿ ಮಾರುವ ಜಾಗದಲ್ಲಿ ನಾವು ಗಿಡ ವಿತರಿಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ, ಕಳೆದ ವರ್ಷ ೩ಸಾವಿರಕ್ಕೂ ಹೆಚ್ಚು ಗಿಡ ನೀಡಿದ್ದೇವೆ ಈ ಬಾರಿಯೂ ಗಿಡ ನೀಡುತ್ತಿದ್ದೇವೆ ಎಂದರು.
ಪ್ರತಿ ಮನುಷ್ಯ ಹುಟ್ಟುಹಬ್ಬ ಆಚರಿಸುವ ವೇಳೆ ಅಥವಾ ಯಾವುದೇ ಕಾರ್ಯಕ್ರಮವಾಗಲಿ ಗಿಡ ನೆಟ್ಟು ಆಚರಿಸಬೇಕು. ಸುಖಾಸುಮ್ಮನೆ ಪಟಾಕಿ ಸಿಡಿಸಿ ಮಕ್ಕಳಿಗೆ ಹಾಗೂ ಪ್ರಾಣಿಗಳಿಗೆ ವಿಷ ಉಣಿಸುವ ಕಾಯಕ ಮಾಡಬೇಡಿ, ಅದರ ಬದಲು ಮರಗಿಡಗಳನ್ನು ಸಂರಕ್ಷಿಸಿ ಎಂದು ಕೋರಿದರು.
ಈ ವೇಳೆ ಪಟಾಕಿ ಕೊಂಡುಕೊಳ್ಳಲು ಬರುವ ಸಾರ್ವಜನಿಕರಿಗೆ ಉಚಿತವಾಗಿ ಗಿಡ ನೀಡಿ ಪರಿಸರ ಸಂರಕ್ಷಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಹರ್ಷವರ್ಧನ್, ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತರಾದ ಕೆ.ವಿ.ಶಂಕರಪ್ಪ, ಆರ್‌ಐ ರಾಜೇಂದ್ರಕುಮಾರ್, ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತ ಸುರೇಶ್,ಸಂಘಟಕ ಬಾಬು, ಕನ್ನಡಮಿತ್ರ ವೆಂಕಟಪ್ಪ, ನಿವೃತ್ತ ಶಿಕ್ಷಕ ವೆಂಕಟಕೃಷ್ನಯ್ಯ ,ಉಪನ್ಯಾಸಕ ಶರಣಪ್ಪ ಗಬ್ಬೂರು, ಟೈಗರ್ ವೆಂಕಟೇಶ್, ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಬಿ.ವಿ.ಸ್ವರ್ಣರೇಖಾ, ಖಜಾಂಚಿ ವಿಜಯಲಕ್ಷ್ಮಿ, ಬಿ.ಡಿ.ವೆಂಕಟೇಶ್, ಕರವೇ ಚಂಬೇರಾಜೇಶ್ ಉಪಸ್ಥಿತರಿದ್ದರು.