ಪಟಾಕಿ ಸಿಡಿತ 15ಕ್ಕೂ ಹೆಚ್ಚು ಮಂದಿಗೆ ಗಾಯ

ಬೆಂಗಳೂರು,ನ.೧೫-ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿ ನಿನ್ನೆ ನಗರದಲ್ಲಿ ಪಟಾಕಿ ಸಿಡಿಸಲು ಹೋದ ೧೫ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪಟಾಕಿ ಸಿಡಿಸಿದವರು ಹಾಗೂ ಬೇರೆಯವರು ಹಚ್ಚಿದ ಪಟಾಕಿ ಕಿಡಿ ತಗುಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೀಪಾವಳಿ ಹಬ್ಬದಲ್ಲಿ ಪಟಾಕಿಯಿಂದ ಸೃಷ್ಟಿಯಾಗುವ ಸಮಸ್ಯೆ ಅಷ್ಟಿಷ್ಟಲ್ಲ. ಈ ಬಾರಿಯೂ ಅಂತಹ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಹಿನ್ನೆಲೆ ರಾಜ್ಯ ಸರ್ಕಾರ ಮಾರ್ಗಸೂಚಿಗಳೊಂದಿಗೆ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಿದೆ. ಆದ್ರೆ ಹಾನಿ ಮಾತ್ರ ತಪ್ಪಿಲ್ಲ. ನಿನ್ನೆ ಸುಮಾರು ೧೫ ಜನರಿಗೆ ಗಾಯವಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಿಂಟೋ ಆಸ್ಪತ್ರೆಯಲ್ಲಿ ಒಬ್ಬರು, ನಾರಾಯಣ ಆಸ್ಪತ್ರೆಯಲ್ಲಿ ನಾಲ್ಕು ಮಂದಿ, ನೇತ್ರಧಾಮದಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ನಾಲ್ವರಿಗೆ ತೀವ್ರ ಗಾಯಗಳಾಗಿವೆ. ವಿಜಯಾನಂದ ನಗರದ ೧೨ ವರ್ಷದ ಬಾಲಕನಿಗೆ ಪಟಾಕಿಯಿಂದ ಕಣ್ಣಿನಿಗೆ ಹಾನಿಯಾಗಿದೆ, ಮಿಂಟೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹೂವಿನ ಕುಂಡ ಹಚ್ಚುವಾಗ ಬಾಲಕ ಮಾಸ್ಟರ್ ಎಸ್‌ಗೆ ಮುಖಕ್ಕೆ ಗಾಯ ಆಗಿದೆ. ಮೂಗು ಮತ್ತು ಕಣ್ಣಿನ ಮೇಲ್ಭಾಗದ ಚರ್ಮ ಸುಟ್ಟು ಹೋಗಿದೆ. ಕಣ್ಣಿಗೆ ಹಾನಿಯಾಗಿರುವ ಸಾಧ್ಯತೆ ಇದ್ದು, ಸದ್ಯಕ್ಕೆ ಯಾವುದೇ ಅಪಾಯ ಇಲ್ಲ. ಮಿಂಟೋ ಆಸ್ಪತ್ರೆಯ ವೈದ್ಯರು ಬಾಲಕನಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಪಟಾಕಿ ಸಿಡಿತಗೊಂಡ ಗಾಯಗೊಂಡವರಲ್ಲಿ ಬಾಲಕರೇ ಹೆಚ್ಚಾಗಿದ್ದು, ಹಸಿರು ಪಟಾಕಿಗೆ ಮಾತ್ರ ಅನುಮತಿ ಇರುವುದರಿಂದ ಈ ಬಾರಿ ಪಟಾಕಿಯಿಂದ ಗಾಯಗೊಂಡರು ಕಳೆದ ಬಾರಿಗಿಂತ ತೀರಾ ಕಡಿಮೆಯಾಗಿದೆ.