
ಮೂವರು ಗಂಭೀರ
ಬೆಂಗಳೂರು,ನ.೧೫-ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿ ಕಳೆದ ಮೂರು ದಿನಗಳಿಂದ ನಗರದಲ್ಲಿ ಪಟಾಕಿ ಸಿಡಿತದಿಂದ ೬೦ ಕ್ಕೂ ಹೆಚ್ಚು ಮಂದಿಯ ಕಣ್ಣುಗಳಿಗೆ ಹಾನಿಯಾಗಿವೆ ಇದರ ಜೊತೆಗೆ ೫೦ ಮಂದಿಯ ಮೈಕೈಗಳಿಗೆ ಸುಟ್ಟ ಗಾಯಗಳಾಗಿವೆ.ಜನರ ಬಾಳಲ್ಲಿ ಬೆಳಕಾಗಬೇಕಾಗಿದ್ದ ದೀಪಾವಳಿಯ ಸಂಭ್ರಮದಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡಿರುವ ಕೆಲವರ ಬಾಳನ್ನ ಕತ್ತಲಾಗಿಸುತ್ತಿದೆ. ಪ್ರತಿ ವರ್ಷದಂತೆ ಬಾರಿ ಕೂಡ ದೀಪಾವಳಿಯಲ್ಲಿ ಪಟಾಕಿ ಅವಗಢಗಳು ಸಂಭವಿಸಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಕಳೆದ ನ.೧೨ರಿಂದ ಪ್ರಾರಂಭವಾಗಿರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ೬೦ ಕ್ಕೂ ಹೆಚ್ಚು ಪಟಾಕಿ ಸಂಬಂಧಿತ ಗಾಯಗಳ ಪ್ರಕರಣಗಳು ವರದಿಯಾಗಿವೆ. ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರಿಗೆ ಗಂಭೀರವಾದ ಗಾಯಗಳಾಗಿವೆ. ಅವರ ಒಂದು ಕಣ್ಣಿನ ದೃಷ್ಟಿ ಹಾಳಾಗುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ.ಶ್ರೀರಾಂಪುರದಲ್ಲಿ ೧೮ ವರ್ಷದ ಯುವಕ ನ.೧೩ರಂದು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು ಆತನ ಕಣ್ಣಿನ ಭಾಗಕ್ಕೆ ಹೆಚ್ಚಿನ ಗಾಯಗಳಾಗಿವೆ. ಧರ್ಮಾವರಂನ ೧೦ ವರ್ಷದ ಬಾಲಕಿ ಮತ್ತು ನಗರದ ೨೨ ವರ್ಷದ ಯುವಕನಿಗೂ ಕಣ್ಣಿನ ಭಾಗಕ್ಕೆ ಹೆಚ್ಚಿನ ಗಾಯಗಳಾಗಿವೆ. ಇದರಿಂದಾಗಿ ಅವರಿಗೆ ದೃಷ್ಟಿ ಸಮಸ್ಯೆ ಎದುರಾಗಿದೆ.ಮಿಂಟೋ ಆಸ್ಪತ್ರೆಯ ನಿರ್ದೇಶಕ ಜಿ.ನಾಗರಾಜು ಮಾತನಾಡಿ, ಮೂವರಿಗೂ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ದೀರ್ಘಾವಧಿ ಚಿಕಿತ್ಸೆ ಅಗತ್ಯವಿದೆ. ನ.೧೩ರ ಸಂಜೆಯವರೆಗೆ ಮಿಂಟೋದಲ್ಲಿ ಒಟ್ಟು ಒಂಬತ್ತು ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನವೆಂಬರ್ ೧೨ ರಂದು ಬಿಹಾರದಲ್ಲಿ ಬಿಹಾರಿ ಕುಟುಂಬ ಮೂಲದ ಆರು ವರ್ಷದ ಬಾಲಕ ಕೂಡ ಪಟಾಕಿ ಸಿಡಿಸಿ ಗಾಯಗೊಂಡಿದ್ದು ಬಾಲಕನಿಗೆ ಸ್ಥಳೀಯ ಚಿಕಿತ್ಸಾಲಯದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಅವನನ್ನು ನಾರಾಯಣ ನೇತ್ರಾಲಯಕ್ಕೆ ಶಿಫ್ಟ್ ಮಾಡಲಾಗಿದೆ ಎಂದರು.ನಾರಾಯಣ ಆಸ್ಪತ್ರೆಯ ಅಧ್ಯಕ್ಷ ರೋಹಿತ್ ಶೆಟ್ಟಿ ಮಾತನಾಡಿ, ಮಗು ದೃಷ್ಟಿ ಕಳೆದುಕೊಳ್ಳಬಹುದು ಎಂಬ ಆತಂಕದಲ್ಲಿ ಕುಟುಂಬಸ್ಥರು ತಕ್ಷಣವೇ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದು ಆಸ್ಪತ್ರೆಗೆ ಸೇರಿಸಿದ್ದಾರೆ. ಅವರು ತಮ್ಮ ಲೆಗೇಜ್‌ನೊಂದಿಗೆ ರೈಲ್ವೆ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ಬಂದರು. ಅದೃಷ್ಟವಶಾತ್, ಹುಡುಗನಿಗೆ ಗಂಭೀರವಾದ ಗಾಯವಾಗಿಲ್ಲ ಮತ್ತು ನಾವು ಅವನಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ನಾರಾಯಣ ನೇತ್ರಾಲಯದಲ್ಲಿ ಈ ವರ್ಷ ಒಟ್ಟು ೨೪ ಪ್ರಕರಣಗಳು ದಾಖಲಾಗಿವೆ. ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ ಕ್ರಮವಾಗಿ ೨೮ ಮತ್ತು ಮೂರು ಪ್ರಕರಣಗಳು ದಾಖಲಾಗಿವೆ. ಆಸ್ಪತ್ರೆಯಲ್ಲಿ ಕಂಡುಬರುವ ೨೪ ಪ್ರಕರಣಗಳಲ್ಲಿ ೧೩ ಪ್ರಕರಣಗಳು ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎಂದು ಡಾ. ಶೆಟ್ಟಿ ಹೇಳಿದರು.ಸುಮಾರು ಶೇ.೯೦ರಷ್ಟು ಪ್ರಕರಣಗಳು ಪಟಾಕಿ ಸಿಡಿಸುವುದನ್ನು ನೋಡಿ ಗಾಯಗೊಂಡವರೇ ಆಗಿದ್ದಾರೆ, “ಮೂರು ವರ್ಷದ ಮಗು ಸೇರಿದಂತೆ ಆರು ಮಕ್ಕಳು ಬಳಲುತ್ತಿದ್ದಾರೆ. ಕಾಟನ್‌ಪೇಟೆಯ ಟೈಲರ್ ಸೇರಿದಂತೆ ಇಬ್ಬರು ಪೇದೆಗಳು ಆಂತರಿಕ ಆಘಾತಕ್ಕೆ ಒಳಗಾಗಿದ್ದಾರೆ. ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗಾಳಿಯಿಂದ ಹಾರಿ ಬಂದ ಪಟಾಕಿಯೊಂದು ಅವರ ಬಳಿ ಸಿಡಿದಿದೆ. ಅವರು ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಡಾ. ಶೆಟ್ಟಿ ಮಾಹಿತಿ ನೀಡಿದರು.
ಉಳಿದವರಿಗೆ ಕಣ್ಣಿನ ರೆಪ್ಪೆಯ ಮೇಲೆ ಸುಟ್ಟಗಾಯಗಳು ಅಥವಾ ಕಣ್ಣಿಗೆ ಗಾಯಗಳಾಗಿವೆ. ಚಿಕ್ಕ ಚಿಕ್ಕ ರಸ್ತೆಗಳಲ್ಲಿ, ಜನ ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಪಟಾಕಿ ಸಿಡಿಸಲು ಸರ್ಕಾರ ಅನುಮತಿ ನೀಡಬಾರದು. ಇದರಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಗಾಯಗೊಳ್ಳದಂತೆ ರಕ್ಷಿಸಲು ಸಹಾಯ ಮಾಡುತ್ತದೆ ಎಂದರು. ಶಂಕರ ಕಣ್ಣಿನ ಆಸ್ಪತ್ರೆಯ ಕಾರ್ನಿಯಾ, ಕಣ್ಣಿನ ಪೊರೆ ಮತ್ತು ವಕ್ರೀಕಾರಕ ಸೇವೆಗಳ ಸಲಹೆಗಾರ ಆನಂದ್ ಬಾಲಸುಬ್ರಮಣ್ಯಂ ಮಾತನಾಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ೨೮ ಪ್ರಕರಣಗಳಲ್ಲಿ ೧ ವರ್ಷ ವಯಸ್ಸಿನ ಇಬ್ಬರು ಮಕ್ಕಳು, ಮೂವರು ಗಂಡು ಮಕ್ಕಳು (೬, ೧೦, ಮತ್ತು ೧೨) ಮತ್ತು ಇಬ್ಬರು ಹುಡುಗಿಯರಿದ್ದಾರೆ (೪ ವರ್ಷ). ಯಾವುದೇ ಗಾಯಗಳು ಗಂಭೀರ ಸ್ವರೂಪದಲ್ಲಿಲ್ಲ ಎಂದು ತಿಳಿಸಿದ್ದಾರೆ.
ಮೈಕೈಗೆ ಸುಟ್ಟಗಾಯಗೊಂಡವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಗಂಭೀರವಾದ ಗಾಯಗೊಂಡವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಜನರು ಪಟಾಕಿ ಮಳಿಗೆಗಳಲ್ಲಿ ಹಸಿರು ಪಟಾಕಿ ಕುರಿತು ವಿಚಾರಿಸಿದ್ದಾರೆ. ಆದರೆ, ಸರ್ಕಾರದ ಸೂಚನೆಯಂತೆ ಎನ್‌ಇಇಆರ್‌ಐ ಲೋಗೋ ಮತ್ತು ಕ್ಯೂ ಆರ್ ಕೋಡ್ ಇರುವ ನೈಜ ಹಸಿರು ಪಟಾಕಿ ಮಾರುಕಟ್ಟೆಯಲ್ಲಿ ಕಾಣಿಸಿಲ್ಲ. ಹೀಗಾಗಿ ದೊರೆತ ಪಟಾಕಿಗಳೆಲ್ಲವನ್ನು ಸಿಡಿಸಿದ್ದಾರೆ.