ಪಟಾಕಿ ಲಾಭದ ಹಣ ಅಂಧ ಮಕ್ಕಳ ಶಾಲೆಗೆ

ಬೀದರ್: ನ.14:ದೀಪಾವಳಿ ಪ್ರಯುಕ್ತ ಸದಸ್ಯರಿಗೆ ಪಟಾಕಿ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಹುಮನಾಬಾದ್‍ನ ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನದ ಶ್ರೀ ಮಾಣಿಕಪ್ರಭು ಅಂಧ ಮಕ್ಕಳ ವಸತಿ ಶಾಲೆಗೆ ಕೊಡುವ ಮೂಲಕ ಬೀದರ್‍ನ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಗಮನ ಸೆಳೆದಿದೆ.
ಕ್ಲಬ್ ಪದಾಧಿಕಾರಿಗಳು ಅಂಧ ಮಕ್ಕಳ ಶಾಲೆಯಲ್ಲಿ ಮಕ್ಕಳ ದಿನ ಆಚರಿಸಿ, ಪಟಾಕಿ ಲಾಭದ ರೂ. 30 ಸಾವಿರದ ಚೆಕ್‍ನ್ನು ಶಾಲೆಯ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.
ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೆ ಎಲ್ಲರೂ ಪಟಾಕಿ ಖರೀದಿಸುತ್ತಾರೆ. ಹೀಗಾಗಿ ಈ ಬಾರಿ ಕ್ಲಬ್‍ನಿಂದ ಹೊಲ್‍ಸೇಲ್ ದರದಲ್ಲಿ ಪಟಾಕಿ ಖರೀದಿಸಿ, ಸದಸ್ಯರಿಗೂ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಕೊಟ್ಟು ಅದರಿಂದ ಬರುವ ಆದಾಯವನ್ನು ಸಾಮಾಜಿಕ ಕಾರ್ಯಕ್ಕೆ ಬಳಸುವ ಯೋಚನೆ ಹೊಳೆದಿತ್ತು. ಅದರಂತೆ ಮುಂದುವರಿದೇವು. ಹಣದ ಸದ್ಬಳಕೆ ಆಗಲಿದ್ದ ಕಾರಣ ಸದಸ್ಯರು ಖುಷಿ ಖುಷಿಯಿಂದ ಪಟಾಕಿ ಖರೀದಿಸಿದರು. ರೂ. 30 ಸಾವಿರ ಲಾಭ ಬಂದಿತು ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ನಿತಿನ್ ಕರ್ಪೂರ ಹೇಳಿದರು.
ಅಂಧ ಮಕ್ಕಳ ಸೇವೆ ಮಾನವೀಯ ಕಾರ್ಯವಾಗಿದೆ. ಹೀಗಾಗಿ ಮಕ್ಕಳಿಗೆ ವಿವಿಧ ಸೌಲಭ್ಯ ಕಲ್ಪಿಸಲು ಒಂದಿಷ್ಟು ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಪಟಾಕಿ ಲಾಭದ ಹಣವನ್ನು ಶಾಲೆಗೆ ದೇಣಿಗೆ ರೂಪದಲ್ಲಿ ಕೊಡಲಾಗಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜಕ್ಕೆ ಕೊಡುಗೆ ಕೊಡಲು ಪ್ರಯತ್ನಿಸುತ್ತಿದೆ. ಕ್ಲಬ್‍ನಿಂದ ಬರುವ ದಿನಗಳಲ್ಲಿ ಇನ್ನೂ ಅನೇಕ ಕಾರ್ಯಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ ಎಂದು ಹೇಳಿದರು.
ಮಕ್ಕಳ ದಿನಾಚರಣೆ ನಿಮಿತ್ತ ಮಕ್ಕಳಿಗೆ ಹಣ್ಣು ಹಾಗೂ ಚಾಕೊಲೇಟ್ ವಿತರಿಸಲಾಯಿತು. ಶ್ರೀ ಮಾಣಿಕಪ್ರಭು ಸಂಸ್ಥಾನದ ಜ್ಞಾನರಾಜ ಮಹಾರಾಜ, ಆನಂದರಾಜ ಮಹಾರಾಜ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಕ್ಲಬ್ ಉಪಾಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಡಾ. ರಿತೇಶ್ ಸುಲೆಗಾಂವ್, ಖಜಾಂಚಿ ಸತೀಶ ಸ್ವಾಮಿ, ಸ್ವರ್ಣ ಕನ್‍ಸ್ಟ್ರಕ್ಷನ್ಸ್ ಮಾಲೀಕ ವೀರಶೆಟ್ಟಿ ಮಣಗೆ, ದಿ ಮಾಣಿಕ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯೆ ಸುಮಂಗಲಾ ಜಾಗೀರದಾರ್, ಪ್ರಮುಖರಾದ ಪ್ರಭಾಕರ ನಾಗರಾಳೆ, ಪ್ರಭು ಪಾಂಚಾಳ ಇದ್ದರು. ಶಶಿಧರ ಆನಂದ ಮಠ ನಿರೂಪಿಸಿದರು.