ಪಟಾಕಿ ರಹಿತ ಕರುಣೆಯ ಬೆಳಕಿನ ದೀಪಾವಳಿ ಆಚರಿಸೋಣ

ದಾವಣಗೆರೆ.ನ.೭; ರಾಜ್ಯಸರ್ಕಾರ ಈ ವರ್ಷ ಬೆಳಕಿನ ಹಬ್ಬ ದೀಪಾವಳಿಯನ್ನು ಪಟಾಕಿ ರಹಿತವಾಗಿ ಆಚರಿಸೋಣವೆಂದು ಪಟಾಕಿ ನಿಷೇಧ ಮಾಡುವ ನಿರ್ಣಯ ತೆಗೆದುಕೊಂಡಿರುವುದು ಸ್ವಾಗತಾರ್ಹ. ಆದರೆ ನಿಷೇಧ ಮಾಡಿದರೂ ಅದನ್ನು ವಿರೋಧಿಸಿ ಪಟಾಕಿ ಹೊಡೆಯುವವರಿಗೆ ಮತ್ತು ಮಾರುವವರಿಗೆ ಶಿಕ್ಷೆ ವಿಧಿಸಬೇಕು ಎಂದು ಕರುಣಾಜೀವ ಕಲ್ಯಾಣ ಟ್ರಸ್ಟ್ ನ ಶಿವನಕೆರೆ ಬಸವಲಿಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.ಪೋಲೀಸರು ಬಿಗಿ ಕ್ರಮವನ್ನು ತೆಗೆದುಕೊಂಡಾಗ  ಮಾತ್ರ ಸಂಪೂರ್ಣವಾಗಿ ಪಟಾಕಿಯಿಂದಾಗುವ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು. ದುಷ್ಟ ಶಕ್ತಿಗಳ ಸಂಕೇತವಾಗಿ ಆಚರಿಸುವ ವಿಜಯೋತ್ಸವವೇ ದೀಪಾವಳಿ, ಜನರ ನೆಮ್ಮದಿ ಹಾಗೂ ಶಾಂತಿಯನ್ನು ಹಾಳು ಮಾಡಿದ್ದಕ್ಕಾಗಿಯೇ ನರಕಾಸುರನನ್ನು ವಿಧಿಸಲಾಯಿತು.

ಆದರೆ, ಇಂದು ಕೇವಲ ಪಟಾಕಿಗಳನ್ನು ಸುಡುವುದರಿಂದ ಹೊರಹೊಮ್ಮುವ ವಿಷಕಾರಕ ಅನಿಲ ಹಾಗೂ ಅತೀ ಹೆಚ್ಚಿನ ಶಬ್ಧಮಾಲಿನ್ಯವನ್ನುಂಟು ಮಾಡುವುದರ ಮೂಲಕ ದುಂದು ವೆಚ್ಚದೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇವೆ. ದೀಪಾವಳಿ ಹಬ್ಬದ ಸಂಜೆಯ ಸಮಯದಲ್ಲಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನಗಳ ಸವಾರರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಗಂಭೀರ ಪರಿಸ್ಥಿತಿ ಉಂಟಾಗಿದೆ.ಮಹಾನಗರಗಳಲ್ಲಿ ಬಹಳಷ್ಟು ನಿವಾಸಿಗಳು ಮಾಲಿನ್ಯದಿಂದ ಈಗಾಗಲೇ ಅಸ್ಥಮಾ ಖಾಯಿಲೆಯಿಂದ ನರಳುತ್ತಿದ್ದಾರೆ. ಅಸ್ಥಮಾ, ಬೀಪಿ, ಹೃದಯಸಂಬಂಧಿ ಖಾಯಿಲೆಗಳುಳ್ಳ ಜನರು, ಹಸುಳೆಗಳು ಹಾಗೂ ವೃದ್ಧರಿಗೆ ದೀಪಾವಳಿ ಹಬ್ಬದ ಆಚರಣೆಯು ಭಯಾನಕ ಹಾಗೂ ದುಃಸ್ವಪ್ನವಾಗಿ ಪರಿಣಮಿಸಿದೆ. ದೀಪಾವಳಿಯ ಸಮಯದಲ್ಲಿ ಅಮಾಯಕರು ವಿನಾಕಾರಣ ತಮ್ಮ ಅಮೂಲ್ಯವಾದ ಕಣ್ಣು, ಕೈಕಾಲುಗಳನ್ನು ಹಾಗೂ ಕೆಲವೊಮ್ಮೆ ಜೀವವನ್ನೂ ಕಳೆದುಕೊಳ್ಳುವ ಮೂಲಕ ಬಲಿಪಶುಗಳಾಗುತ್ತಿದ್ದಾರೆ. ಸಂಭ್ರಮದಿಂದ ಆಚರಿಸುವ ಈ ಹಬ್ಬವು ಕೆಲವೊಂದು ಮುಗ್ಧ ಜನರ ಹಾಗೂ ಜನರ ಕುಟುಂಬ ವರ್ಗದವರಲ್ಲಿ ಮರೆಯಲಾಗದ ಗಾಯ ಮತ್ತು ಸಹಿಸಲಾಗದ ಕೆಟ್ಟ ಪರಿಣಾಮವನ್ನುಂಟು ಮಾಡುತ್ತಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯ ಅಧ್ಯಯನದ ಪ್ರಕಾರ ಬೆಂಗಳೂರು ನಗರವೊಂದರಲ್ಲಿಯೇ ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ ಸುಮಾರು ಅರವತ್ತು ಜನರ ಕಣ್ಣು ಹಾನಿಗೊಳಗಾಗುತ್ತಿದೆ. ಪ್ರತಿ ವರ್ಷ ರಾಜ್ಯದಲ್ಲಿ 600 ಜನರ ಹಾಗೂ ದೇಶದಲ್ಲಿ 12,000 ಜನರ ಕಣ್ಣುಗಳು ಹಾನಿಗೊಳಗಾಗುತ್ತದೆ ಎಂದು ಅಂದಾಜಿಸಲಾಗಿದೆ. ಮಕ್ಕಳಲ್ಲಿ ಅರಿವು ಮೂಡಿಸುವುದರ ಮೂಲಕ ಕಷ್ಟಪಟ್ಟು ದುಡಿದ ಹಣವನ್ನು ಬೂದಿಯಾಗಿಸಿ ಗಟಾರಗಳಲ್ಲಿ ಹರಿಯುವುದನ್ನು ತಪ್ಪಿಸಬಹುದೆಂಬ ನಂಬಿಕೆಯನ್ನು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಹೊಂದಿದೆ ಎಂದಿದ್ದಾರೆ.