ಪಟಾಕಿ, ಮೈಮರೆಯದಿರಿ ಡಾ. ಸುಜಾತ ಮನವಿ

ಬೆಂಗಳೂರು, ನ.೧೩- ಹಸಿರು ಪಟಾಕಿಗಳಲ್ಲೂ ರಸಾಯನಿಕ ಅಂಶ ಇದ್ದು, ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಹಾಗಾಗಿ, ಬೆಳಕಿನ ಹಬ್ಬ ದೀಪಾವಳಿ ದಿನದಂದು ಪಟಾಕಿ ಸಿಡಿಸುವಾಗ ಮೈಮರೆಯಬೇಡಿ ಎಂದು ಮಿಂಟೋ ಕಣ್ಣಾಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ತಿಳಿಸಿದರು.
ನಗರದಲ್ಲಿಂದು ಆಸ್ಪತ್ರೆಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಸಿರು ಪಟಾಕಿಗಳಲ್ಲೂ ರಸಾಯನಿಕ ಮದ್ದು ಇದೆ. ಸಂಪೂರ್ಣವಾಗಿ ಇದು ಹಾನಿ ಉಂಟುಮಾಡುವುದಿಲ್ಲ ಎಂದು ಯಾವುದೇ ಅಧ್ಯಯನ ತಿಳಿಸಿಲ್ಲ. ಈ ಪಟಾಕಿಗಳು ಸಿಡಿಯುವ ರಭಸಕ್ಕೆ ಹಾನಿ ಉಂಟಾಗಲಿದೆ ಎಂದು ಹೇಳಿದರು.
ಎಲ್ಲಾ ರೀತಿಯ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆನ್ನುವುದು ವೈದ್ಯರ ಒತ್ತಾಯವಾಗಿದೆ.ಆದರೆ, ವಾರ್ಷಿಕವಾಗಿ ೨ ಸಾವಿರಕ್ಕೂ ಅಧಿಕ ಕೋಟಿಗಳಷ್ಟು ಪಟಾಕಿ ವ್ಯಾಪಾರ ಆಗುತ್ತದೆ ಎಂದ ಅವರು, ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕಣ್ಣಿಗೆ ಹಾನಿಯಾದವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದಿನವಿಡೀ ಕಾರ್ಯ ನಿರ್ವಹಿಸಲು ಬೇಕಾದ ಸಿದ್ದತೆಗಳನ್ನು ಮಾಡಿಕೊಂಡಿರುವುದಾಗಿ ನುಡಿದರು.
ರಜೆ ತೆಗೆದುಕೊಳ್ಳುವುದಿಲ್ಲ: ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗಳಾದಾಗ ಅಂಥವರಿಗೆ ತುರ್ತು ಸೇವೆಯ ಅಗತ್ಯವಿರುತ್ತದೆ. ನಮ್ಮ ಆಸ್ಪತ್ರೆಯಲ್ಲಿ ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಎಲ್ಲ ವೈದ್ಯರು, ವೈದ್ಯಯೇತರ ಸಿಬ್ಬಂದಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ನಾನು ಈ ಹಬ್ಬಕ್ಕೆ ರಜೆಯೇ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.
ಪ್ರತಿ ವರ್ಷವೂ ದೀಪಾವಳಿ ಸಂದರ್ಭದಲ್ಲಿ ಸರಾಸರಿ ೫೦ರಿಂದ ೬೦ ಜನರು ಕಣ್ಣಿನ ಚಿಕಿತ್ಸೆಗಾಗಿ ದಾಖಲಾಗುತ್ತಾರೆ. ಇದೇ ರೀತಿ ರಾಜ್ಯದ ಕಣ್ಣಾಸ್ಪತ್ರೆಗಳಲ್ಲೂ ದಾಖಲಾಗುತ್ತಾರೆ. ಕಣ್ಣಿಗೆ ತೊಂದರೆಯಾಗಿ ಆಸ್ಪತ್ರೆಗೆ ದಾಖಲಾಗುವವರಲ್ಲಿ ೧೪ ವರ್ಷದೊಳಗಿನ ಮಕ್ಕಳೇ ಶೇ.೪೦ರಷ್ಟಿರುತ್ತಾರೆ. ಅದರಲ್ಲೂ ಗಂಡುಮಕ್ಕಳ ಸಂಖ್ಯೆ ಹೆಚ್ಚಾಗಿರುತ್ತದೆ.
ಕಳೆದ ವರ್ಷ ೪೦ಕ್ಕೂ ಅಧಿಕ ಮಂದಿ ಮಿಂಟೋ ಕಣ್ಣಾಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ೧೨ ವರ್ಷದೊಳಗಿನವರು ೧೨ ಮಂದಿ, ಇಬ್ಬರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಪಟಾಕಿ ಸಿಡಿಸುವಾಗ ಮುಖವನ್ನು ದೂರವಿಟ್ಟುಕೊಳ್ಳಬೇಕು, ಐದು ವರ್ಷದೊಳಗಿನ ಮಕ್ಕಳಿಗೆ ಪಟಾಕಿ ಸಿಡಿಸಲು ಬಿಡಬಾರದು. ಮನೆ ಮತ್ತು ವಾಹನ ನಿಲುಗಡೆ ಸ್ಥಳದಲ್ಲಿ ಪಟಾಕಿ ಸುಡಬಾರದು.
ಸುಟ್ಟಪಟಾಕಿಗಳನ್ನು ಮನಬಂದಂತೆ ಬಿಸಾಡಬಾರದು. ಸಾಧ್ಯವಾದಷ್ಟು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಪಟಾಕಿ ಸಿಡಿಸುವ ವೇಳೆ ಸಣ್ಣಪುಟ್ಟ ಗಾಯಗಳಾದರೂ ನಿರ್ಲಕ್ಷಿಸದೆ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಅವರು ತಿಳಿಸಿದರು.

ಸಹಾಯವಾಣಿ ಸಂಖ್ಯೆ
ಕಣ್ಣಿನ ಸಮಸ್ಯೆ ಕುರಿತು ಸಹಾಯವಾಣಿ
೦೮೦-೨೬೭೦೭೧೭೬ ಮತ್ತು ಮೊ: ೯೪೮೧೭೪೦೧೩೭ ಕರೆ ಮಾಡಿ ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದಾಗಿದೆ.