ಪಟಾಕಿ ನಿಷೇಧಿಸಿದ ಸರ್ಕಾರ, ವರ್ತಕರು ಕಂಗಾಲು

ಕಲಬುರಗಿ:ನ.6: ಕೊರೊನಾ ಹಿನ್ನೆಲೆ ಸರ್ಕಾರ ಪಟಾಕಿ ನಿಷೇಧಿಸಿದ್ದು, ಈ ನಿರ್ಧಾರದಿಂದ ಪಟಾಕಿ ವರ್ತಕರು ಕಂಗಾಲಾಗಿ ಸರ್ಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದ ಹಲವೆಡೆ ಈಗಾಗಲೇ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. ಶೆಡ್ ನಿರ್ಮಾಣ ಕಾರ್ಯ ಆರಂಭಿಸಿದ್ದೇವೆ. ತಮಿಳುನಾಡಿನ ಶಿವಕಾಶಿ ಸೇರಿದಂತೆ ವಿವಿಧ ಕಡೆಗಳಿಂದ ಕೋಟ್ಯಾಂತರ ರೂ. ಮೌಲ್ಯದ ಪಟಾಕಿ ಖರೀದಿಸಲಾಗಿದೆ.
ಈ ಮುಂಚೆ ಸರ್ಕಾರ 17 ದಿನ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿತ್ತು. ಹೀಗಾಗಿ ಪಟಾಕಿ ಮಾರಾಟಕ್ಕೆ ಭರ್ಜರಿ ಸಿದ್ಧತೆ ಮಾಡಿದ್ದೆವು. ಈಗ ಏಕಾಏಕಿ ಸರ್ಕಾರ ಪಟಾಕಿ ನಿಷೇಧಿಸಿದೆ ಎಂದು ವ್ಯಾಪಾರಸ್ಥರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರದ ದ್ವಂದ್ವ ನೀತಿ ಬಡ ಪಟಾಕಿ ವ್ಯಾಪಾರಿಗಳಲ್ಲಿ ಆತಂಕ ಹೆಚ್ಚಿಸಿದೆ. ಪಟಾಕಿ ಖರೀದಿಸಿದ ನಂತರ ಮಾರಾಟ ನಿಷೇಧ ಎಂದರೆ ಹೇಗೆ ಎಂದು ಸರ್ಕಾರಕ್ಕೆ ವರ್ತಕರು ಪ್ರಶ್ನೆ ಮಾಡಿದ್ದಾರೆ.
ಶರಣ ಬಸವೇಶ್ವರ ಮೈದಾನದಲ್ಲಿ ತಲೆಯೆತ್ತಿದ ಪಟಾಕಿ ಅಂಗಡಿಗಳು:ಕಲಬುರಗಿಯ ಪ್ರಸಿದ್ಧ ಶರಣಬಸವೇಶ್ವರ ಮೈದಾನದಲ್ಲಿ ನಲವತ್ತಕ್ಕೂ ಅಧಿಕ ಪಟಾಕಿ ಮಾರಾಟ ಮಳಿಗೆಗಳ ನಿರ್ಮಾಣಕ್ಕೆ ಶೆಡ್ ನಿರ್ಮಿಸಲಾಗುತ್ತಿದೆ.
ಸರ್ಕಾರದ ಅನುಮತಿ‌ ಪಡೆದು ಮಳಿಗೆ ಸ್ಥಾಪನೆಗೆ ಮುಂದಾಗಿದ್ದೆವು. ಪ್ರತಿ ವ್ಯಾಪಾರಿಯೂ 2 ರಿಂದ 5 ಲಕ್ಷ ರೂಪಾಯಿ ವೆಚ್ಚ ಮಾಡಿ ಪಟಾಕಿ‌ ಖರೀದಿಸಿದ್ದಾರೆ. ಈಗ ಸರ್ಕಾರ ನಿಷೇಧಕ್ಕೆ ಮುಂದಾಗಿದೆ ಎಂದು ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ.