
ಬೆಂಗಳೂರು, ಅ.೮- ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದ ಪಟಾಕಿ ಅಂಗಡಿಯಲ್ಲಿ ನಡೆದ ಅಗ್ನಿ ದುರಂತದ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.
ಅತ್ತಿಬೆಲೆಯ ಪಟಾಕಿ ಗೋಡೌನ್ ಅಗ್ನಿ ದುರಂತ ಸ್ಥಳಕ್ಕ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಪ್ರಕರಣದ ಸಂಬಂಧ ಸ್ಫೋಟಕ ಕಾಯ್ದೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಿದರು ದುರಂತದ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ ೨೮೫, ೨೮೬, ೩೩೭, ೩೩೮, ೪೨೭, ೩೦೪ ಅಡಿಯಲ್ಲಿ ಘಟನೆಗೆ ಕಾರಣರಾದ ಆರೋಪಿ ಲೈಸನ್ಸ್ ಹೊಂದಿದ್ದ ರಾಮಸ್ವಾಮಿ ರೆಡ್ಡಿ, ಆತನ ಪುತ್ರ ನವೀನ್ ರೆಡ್ಡಿ, ಜಾಗದ ಮಾಲೀಕರಾದ ಜಯಮ್ಮ ಹಾಗೂ ಅವರ ಪುತ್ರ ಅನಿಲ್ ರೆಡ್ಡಿ, ಅಂಗಡಿ ಮ್ಯಾನೇಜರ್ ಲೋಕೇಶ್ ವಿರುದ್ಧ ಕೇಸ್ ದಾಖಲಾಗಿದೆ ಎಂದರು.
ಪಟಾಕಿ ಅಂಗಡಿಯಲ್ಲಿ ಸುಮಾರು ೩೫ ಜನ ಕೆಲಸ ಮಾಡುತ್ತಿದ್ದರು. ಏಕಾಏಕಿ ಬೆಂಕಿ ಆವರಿಸಿದ್ದು, ಅಂಗಡಿಯೊಳಗೆ ಇದ್ದ ೧೪ ಜನರು ಹೊರಗೆ ಬರಲು ಆಗಿಲ್ಲ. ಬೆಂಕಿ ಹಾಗೂ ಹೊಗೆ ಆವರಿಸಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಇನ್ನು ಘಟನೆ ಸಂಬಂಧ ಮಾಲೀಕ ಹಾಗೂ ಅವರ ಮಗನನ್ನು ಬಂಧಿಸಲಾಗಿದೆ. ಒಟ್ಟು ಐವರ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರು ನಗರ ಸೇರಿ ಇತರೆಡೆ ಇಂತಹ ಅಕ್ರಮ ಮಳಿಗೆಗಳು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ. ದುರಂತ ಸಂಬಂಧ ಟ್ರಕ್ ಮಾಲೀಕನ್ನು ಕೂಡ ವಶಕ್ಕೆ ಪಡೆಯುತ್ತೇವೆ. ಲೈಸೆನ್ಸ್ ನೀಡುವಾಗ ಅಧಿಕಾರಿಗಳು ಕೂಡ ಪರಿಶೀಲನೆ ಮಾಡಬೇಕಿತ್ತು. ಇದರಲ್ಲಿ ಅಧಿಕಾರಿಗಳ ತಪ್ಪು ಇದ್ದರೆ ಅವರ ಮೇಲೆಯೂ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಮೃತದೇಹ ರವಾನೆ:
ತಮಿಳುನಾಡಿನ ಅಮಾಪೇಟೈ ಗ್ರಾಮದಲ್ಲಿ ಮೃತ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆ ಬಳಿಕ ಸ್ವಗ್ರಾಮಕ್ಕೆ ಮೃತರ ಶವ ರವಾನೆ ಮಾಡಲಾಗುತ್ತದೆ.
ಮೃತರಲ್ಲಿ ಗಿರಿ ಬಿನ್ ವೇಡಿಯಪ್ಪನ್, ಸಚೀನ್ ಬಿನ್ ಲೇಟ್ ವೇಡಿಯಪ್ಪನ್, ವಿಜಯರಾಘವನ್, ವಿಳಂಬರತಿ ಬಿನ್ ಸೆಂದಿಲ್, ಹಾಗೂ ಆಕಾಶ ಬಿನ್ ರಾಜಾ, ವೇಡಿಯಪ್ಪನ್, ಆದಿಕೇಶವ ಬಿನ್ ಪೆರಿಯಾಸ್ವಾಮಿ ಇವೆರಲ್ಲರೂ ಧರ್ಮಪುರಿ ಜಿಲ್ಲೆಯ ಅಮ್ಮಾಪೇಟ್ ನಿವಾಸಿಗಳಾಗಿದ್ದಾರೆ. ಪ್ರಕಾಶ್ ಬಿನ್ ರಾಮು ಇವರು ತಿರುವಣ್ಣಾಮಲೈ ಮೂಲದವರಾಗಿದ್ದಾರೆ.
ಗುರುತು ಪತ್ತೆ:
ವಸಂತರಾಜು ಬಿನ್ ಗೋವಿಂದ ರಾಜು, ಅಬ್ಬಾಸ್ ಬಿಸ್ ಶಂಕರ್, ಪ್ರಭಾಕರನ್ ಬಿನ್ ಗೋಪಿನಾಥ್ ಈ ಮೇಲ್ಕಂಡ ಮೂವರು ಕಲ್ಕುರ್ಚಿ ಜಿಲ್ಲೆಯ ವೆಡುತ್ತ ವೈನತ್ತಂ ಮೂಲವದರು. ನಿತಿಶ್, ಬಿನ್ ಮೇಘನಾಥ್ , ಸಂತೋಷ್ ಬಿನ್ ಕುಮಾರ್ ಈ ಇಬ್ಬರು ತಿರುಪತ್ತೂರು ಜಿಲ್ಲೆಯ ವೆಲ್ಲಕುಟೈ ಗ್ರಾಮದವರು. ಮತ್ತೊಬ್ಬನ ಹೆಸರು ವಿಳಾಸ ಪತ್ತೆ ಆಗಿಲ್ಲ.