ಪಟಾಕಿ ಕಾರ್ಖಾನೆ ಸ್ಫೋಟ:೬ ಮಂದಿ ಸಾವು

ಕೊಲ್ಕತ್ತಾ,ಆ.೨೭-ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿ ೬ ಮಂದಿ ಸುಟ್ಟು ಕರಕಲಾಗಿರುವ ದಾರುಣ ಘಟನೆ ಪಶ್ಚಿಮ ಬಂಗಾಳದ ಉತ್ತರ ೨೪ ಪರಗಣ ಜಿಲ್ಲೆಯ ದತ್ತಾಪುಕೂರ್‌ನಲ್ಲಿ ಸಂಭವಿಸಿದೆ. ಸ್ಫೋಟದ ರಭಸಕ್ಕೆ ದೇಹಗಳು ಕಾರ್ಖಾನೆಯಿಂದ ಹಾರಿ ಹೊರ ಭಾಗದ ಮರದ ಮೇಲೆ ಛಿದ್ರ ಛಿದ್ರವಾಗಿ ಬಿದ್ದಿರುವುದು ಮನಕಲಕುವಂತಿದೆ.
ದೊಡ್ಡ ಪ್ರಮಾಣದಲ್ಲಿ ಅವಘಡ ಸಂಭವಿಸಿದ್ದು, ಸಾವಿನ ಹೆಚ್ಳವಾಗುವ ಭೀತಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿ ಪರಿಹಾರ ಕಾರ್ಯ ಕೈಗೊಂಡಿದೆ.ದತ್ತಾಪುಕೂರ್ ಪ್ರದೇಶದಲ್ಲಿರುವ ಈ ಪಟಾಕಿ ಕಾರ್ಖಾನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಗಣೇಶ ಚತುರ್ಥಿ ಮತ್ತು ದಸರಾ ಹಬ್ಬ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು. ಭಾರೀ ಪ್ರಮಾಣದಲ್ಲಿ ಸಿಡಿಮದ್ದು ಪಟಾಕಿಗಳನ್ನು ದಾಸ್ತಾನು ಮಾಡಲಾಗಿತ್ತು. ಈ ಪಟಾಕಿಗಳು ಸ್ಫೋಟಗೊಂಡು ಭಾರೀ ದುರಂತ ಸಂಭವಿಸಿದೆ.ಈ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ಕಾರ್ಯ ನಡೆಯುತ್ತಿದೆ. ಪಟಾಕಿಗಳು ಸ್ಪೋಟಗೊಂಡಿದ್ದರಿಂದ ಭಾರೀ ಪ್ರಮಾಣದಲ್ಲಿ ಸದ್ದು ಕೇಳಿ ಬಂದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಸ್ಫೋಟ ಸಂಭವಿಸುತ್ತಿದ್ದಂತೆ ಕಾರ್ಖಾನೆ ಹೊತ್ತಿ ಉರಿದಿದೆ. ತನಿಖೆಯಿಂದಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.