ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ೨೦ ಮಂದಿ ಸಾವು

ಥಾಯ್ಲೆಂಡ್,ಜ.೧೮-ಥಾಯ್ಲೆಂಡ್‌ನ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಈ ಭಾರಿ ಸ್ಫೋಟದಿಂದಾಗಿ ೨೦ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಧ್ಯ ಥಾಯ್ಲೆಂಡ್‌ನಲ್ಲಿರುವ ಪಟಾಕಿ ಕಾರ್ಖಾನೆಯೊಂದು ಸ್ಫೋಟಗೊಂಡಿದೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ. ಸ್ಫೋಟದಲ್ಲಿ ಕನಿಷ್ಠ ೨೦ ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ .
ಸುಫಾನ್ ಬುರಿ ಪ್ರಾಂತ್ಯದ ಸ್ಥಳೀಯ ರಕ್ಷಣಾ ಕಾರ್ಯಕರ್ತರು ಫೋಟೋಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಾರ್ಖಾನೆ ಸಂಪೂರ್ಣ ನಾಶವಾಗಿದೆ ಎನ್ನಲಾಗಿದೆ.
ಸ್ಫೋಟದಿಂದ ಕಾರ್ಖಾನೆಯಲ್ಲಿದ್ದ ಯಾವುದೇ ಕಾರ್ಮಿಕರು ಬದುಕುಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಪತ್ತು ನಿರ್ವಹಣಾ ತಂಡವು ಸ್ಥಳಕ್ಕೆ ಧಾವಿಸಿದೆ, ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕಳೆದ ವರ್ಷ ಜುಲೈನಲ್ಲಿ ಥಾಯ್ಲೆಂಡ್‌ನ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ, ೯ ಜನರು ಸಾವನ್ನಪ್ಪಿದರು ಮತ್ತು ೧೧೫ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ನಾರಾಥಿವತ್ ಪ್ರಾಂತ್ಯದ ಸುಂಗೈ ಕೊಲೊಕ್ ನಗರದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಬಗ್ಗೆ ಅಂದಿನ ಸಿಟಿ ಗವರ್ನರ್ ಸನನ್ ಪೊಂಗಕ್ಸೋರ್ನ್ ಮಾಧ್ಯಮಗಳಿಗೆ ಹೇಳಿಕೆ ನೀಡಿ, ೧೧೫ ಮಂದಿ ಗಾಯಗೊಂಡಿದ್ದು, ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗದೆ ಎಂದು ತಿಳಿಸಿದ್ದರು.
ಸ್ಫೋಟದ ಬಗ್ಗೆ ರಾಜ್ಯಪಾಲರು, ತನಿಖೆ ನಡೆಸಿದಾಗ ಪ್ರಾಥಮಿಕವಾಗಿ ಪಟಾಕಿ ಕಾರ್ಖಾನೆಯಲ್ಲಿ ಸ್ಟೀಲ್ ವೆಲ್ಡಿಂಗ್ ಸಮಯದಲ್ಲಿ ಸಂಭವಿಸಿದ ಬೆಂಕಿಯಿಂದಾಗಿ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಫೋಟದ ನಂತರ, ಮಾಧ್ಯಮಗಳಲ್ಲಿ ವೈರಲ್ ಆದ ದೃಶ್ಯಗಳಲ್ಲಿ ಮಾರುಕಟ್ಟೆಯಿಂದ ದೊಡ್ಡ ಹೊಗೆ ಏಳುವ ದೃಶ್ಯ ಕಾಣಿಸಿವೆ.ಸ್ಫೋಟದಿಂದ ಹಲವು ಅಂಗಡಿಗಳು, ಮನೆಗಳು ಮತ್ತು ವಾಹನಗಳಿಗೆ ತೀವ್ರ ಹಾನಿಯಾಗಿದೆ. ಈ ವೇಳೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಹೊಗೆ ಆವರಿಸಿದೆ.