ಪಟಾಕಿ ಅಂಗಡಿಗಳಿಗೆ ದಿಢೀರ್ ದಾಳಿ

ಮಂಗಳೂರು, ನ.೧೭- ಕೋವಿಡ್ -೧೯ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಹೊರತುಪಡಿಸಿ ಇತರ ಪಟಾಕಿಗಳ ಮಾರಾಟ, ಬಳಕೆಯನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ ಮೇರೆಗೆ ದ.ಕ.ಜಿಲ್ಲಾಧಿಕಾರಿಯ ಸೂಚನೆಯಂತೆ ಸೋಮವಾರ ನಗರದ ಹಲವು ಪಟಾಕಿ ಅಂಗಡಿಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್, ಆರೋಗ್ಯ, ಕಂದಾಯ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತಪಾಸಣೆಗೈದಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ನೇತೃತ್ವದ ತಂಡಕ್ಕೆ ಹಸಿರು ಹೊರತುಪಡಿಸಿದ ಪಟಾಕಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ರವಿವಾರ ಸುರತ್ಕಲ್‌ನಲ್ಲಿ ದಾಳಿ ನಡೆಸಿದ್ದ ಅಧಿಕಾರಿಗಳು ಸೋಮವಾರ ಮಂಗಳೂರು, ಕೋಟೆಕಾರ್, ಉಳ್ಳಾಲ ಸಹಿತ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಕೂಡ ದಾಳಿ ನಡೆಸಿ ತಪಾಸಣೆಗೈದಿದ್ದಾರೆ. ಕಾರ್ಯಾಚರಣೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಿ. ಮಂಜು ರಾಜಣ್ಣ, ಮಂಗಳೂರು ಮನಪಾ ವಲಯ ಅಧಿಕಾರಿ ಯಶವಂತ್, ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಎ.ಎಂ.ಶೆಟ್ಟಿ, ವಿವಿಧ ಇಲಾಖೆಯ ಅಧಿಕಾರಿಗಳಾದ ಅಕ್ಷತ್ ಮತ್ತು ರವೀಂದ್ರ, ಯಾಸ್ಮಿನ್, ಪ್ರಭಾಕರ್, ಎಸ್ಸೈಗಳಾದ ಜ್ಞಾನಶೇಖರ್, ಪ್ರದೀಪ್, ಕಲಾಶ್ರೀ ಪಾಲ್ಗೊಂಡಿದ್ದರು.