ಪಚ್ಚನಾಡಿ ಪ್ಲಾಸ್ಟಿಕ್ ಸಂಸ್ಕರಣಾ ಘಟಕಕ್ಕೆ ನ್ಯಾಯಾಧೀಶೆ ಶೀಲಾ ಎ.ಜಿ ಭೇಟಿ

ಮಂಗಳೂರು, ಎ.೬- ನಗರದ ಹೊರವಲಯದ ಪಚ್ಚನಾಡಿಯಲ್ಲಿರುವ ಪ್ಲಾಸ್ಟಿಕ್ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ತ್ಯಾಜ್ಯಗಳು ಬೆಂಕಿಗಾಹುತಿಯಾಗಿ ನಷ್ಟಸಂಭವಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎ.ಜಿ. ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯ ಮೇರೆಗೆ ಭೇಟಿ ನೀಡಿ ಸಂಗ್ರಹಣೆಯಾಗಿರುವ ಕಸಕ್ಕೆ ಬೆಂಕಿ ಬಿದ್ದು ಸ್ಥಳೀಯರಿಗೆ ತೊಂದರೆಯಾಗಿದೆಯೇ ಎಂಬ ಬಗ್ಗೆ ವರದಿ ನೀಡಲು ಸೂಚಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಭೇಟಿ ಮಾಡಿರುವುದಾಗಿ ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿರುವ ಘನತ್ಯಾಜ್ಯ ಘಟಕ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಅವರು ಸರಿಯಾದ ರೀತಿಯಲ್ಲಿ ಕ್ರಮ ವಹಿಸದ ಹಿನ್ನೆಲೆಯಲ್ಲಿ ಭಾನುವಾರದಂದು ಬೆಂಕಿ ಅವಘಡ ಸಂಭವಿಸಿದೆ ಎಂದರು.
ನಿನ್ನೆ ರಾತ್ರಿ ಬೆಂಕಿ ಅವಘಡದಿಂದ ಪ್ಲಾಸ್ಟಿಕ್ ಸಂಸ್ಕರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಅಲ್ಲಿ ಸಂಗ್ರಹಿಸಲಾಗಿದ್ದ ಸುಮಾರು ೬೫ ಲಕ್ಷ ಮೌಲ್ಯದ ೧೩ ಪ್ಲಾಸ್ಟಿಕ್ ಪ್ರತ್ಯೇಕತಾ ಹಾಗೂ ನಿರುಪಯುಕ್ತ ಪ್ಲಾಸ್ಟಿಕ್‌ಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ ಎಂದರು.
ಇಲ್ಲಿನ ಹೊರಗುತ್ತಿಗೆದಾರರು ಘಟಕದಲ್ಲಿ ಕೈಗೊಳ್ಳಬೇಕಾದ ಮಾರ್ಗಸೂಚಿಯನ್ನು ಪಾಲಿಸಿದ್ದಾರೆ ಎಂಬುದರ ಬಗ್ಗೆ ಬೆಂಕಿ ಅವಘಡದ ನಂತರ ಮಾಲಿನ್ಯ ನಿಯಂತ್ರಣ ಮಂಡಳಿ ಘಟನೆಯ ಕುರಿತು ಏನೆಲ್ಲಾ ಕ್ರಮ ಕೈಗೊಂಡಿದೆ ಎಂಬುವುದರ ಬಗ್ಗೆ ಪ್ರಶ್ನಿಸಿದರಲ್ಲದೇ ಘಟಕದ ಉಸ್ತುವಾರಿಯನ್ನು ಹೊಂದಿರುವ ಪಾಲಿಕೆಯ ಅಧಿಕಾರಿಗಳು ಕೈಗೊಂಡಿರುವ ಕಾರ್ಯದ ಬಗ್ಗೆ ಮಾಹಿತಿ ಪಡೆದರು.
ಘಟಕದಲ್ಲಿ ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಬೆಂಕಿಯ ಅವಘಡ ಆಗುತ್ತಿರಲಿಲ್ಲ. ನಿರ್ಲಕ್ಷ್ಯದಿಂದ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು.
ಘಟಕದ ಸುತ್ತಲೂ ಸರಿಯಾದ ಆವರಣ ಗೋಡೆ ಇಲ್ಲ. ಶಾರ್ಟ್ ಸಕ್ರ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತಿದ್ದು, ಘಟನೆಯು ರಾತ್ರಿ ಸಂಭವಿಸಿರುವುದರಿಂದ ಬೆಂಕಿ ತಗುಲಿದ ಬಗ್ಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ ಎಂದರು.
ಪ್ಲಾಸ್ಟಿಕ್‌ಗೆ ಬೆಂಕಿ ಹತ್ತಿ ಉರಿದು, ಅದರಿಂದ ಉಂಟಾದ ದಟ್ಟವಾದ ಹೊಗೆ ಪರಿಸರಕ್ಕೆ ಹಾನಿಕಾರಕವಾಗಿದೆ. ಇದರಿಂದ ಸುತ್ತಮುತ್ತಲಿನಲ್ಲಿ ವಾಸಿಸುವ ಜನರಿಗೆ ತೊಂದರೆಯಾಗಿದೆ. ಇದರ ಬಗ್ಗೆ ಪಾಲಿಕೆ ಸರಿಯಾದ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶೆ ಸೂಚಿಸಿದರು.
ಗುತ್ತಿಗೆದಾರರಲ್ಲಿ ಘಟನೆಗೆ ಸಂಭವಿದ ಕುರಿತು ಪ್ರಶ್ನಿಸಿದರು ಈ ಸಂದರ್ಭದಲ್ಲಿ ಗುತ್ತಿಗೆದಾರರು ಪ್ರತಿಕ್ರಿಯಿಸಿ ಬೆಂಕಿ ಹತ್ತಿದಾಗ ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿನಂದಿಸುವ ಪ್ರಯತ್ನ ನಡೆಸಿದರು. ದಟ್ಟವಾದ ಬೆಂಕಿಯ ಜ್ವಾಲೆಯಿಂದ ಬೆಂಕಿ ನಂದಿಸುವುದು ಕಷ್ಟಕರವಾಗಿತ್ತು. ಬೆಂಕಿಯ ತೀವ್ರತೆಗೆ ಸ್ಥಳೀಯರು ಭಯ ಭೀತರಾಗಿದ್ದರು ಎಂದರು.
ಘಟಕದ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡು, ನಂತರ ಗಾಳಿಗೆ ಬೆಂಕಿ ಹರಡಿಕೊಂಡಿದೆ. ಇದರಿಂದಾಗಿ ಶೀಟ್ ನಿಂದ ನಿರ್ಮಾಣವಾದ ಶೆಡ್ ಗೆ ಬೆಂಕಿ ತಗುಲಿ, ಯಂತ್ರಗಳು ಸುಟ್ಟು ಕರಕಲಾಗಿವೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಇಂಜಿನಿಯರ್ ಅಬ್ದುಲ್ ಖಾದರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.