’ಪಚ್ಚನಾಡಿ ಅಗ್ನಿ ದುರಂತದ ಬಗ್ಗೆ ಸಮಗ್ರ ತನಿಖೆ ನಡೆಯಲಿ’

ಮಂಗಳೂರು, ಎ.೭- ಪಚ್ಚನಾಡಿ ಡಂಪಿಂಗ್ ಯಾರ್ಡ್ ಬಳಿಯ ಪ್ಲಾಸ್ಟಿಕ್ ಸಂಸ್ಕರಣಾ ಘಟಕದಲ್ಲಿ ರವಿವಾರ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಮನಪಾ ವಿಪಕ್ಷ ನಾಯಕ ವಿನಯ ರಾಜ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ರವಿವಾರ ಪಚ್ಚನಾಡಿಯಲ್ಲಿ ಅಗ್ನಿ ದುರಂತ ಸಂಭವಿಸಿದ ಸಂದರ್ಭದಲ್ಲಿ ಆ ಘಟಕದ ಬಳಿ  ಸೂಕ್ತ ಅಗ್ನಿ ಶಾಮಕ ವ್ಯವಸ್ಥೆ ಇಲ್ಲದಿರುವುದು. ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದು ಸೇರಿದಂತೆ ಸಾಕಷ್ಟು ನ್ಯೂನತೆಗಳು ಕಂಡು ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ಯಾಗಬೇಕು ಎಂದು ವಿನಯರಾಜ್ ಆಗ್ರಹಿಸಿದ್ದಾರೆ.

ಡಂಪಿಂಗ್ ಯಾರ್ಡ್ ಬಳಿ ತುರ್ತ ಅಗತ್ಯಗಳಿಗಾಗಿ ನಿರ್ಮಿಸಲಾಗಿದ್ದ ಕೊಳವೆ ಬಾವಿ ಮತ್ತು ಪಂಪ್ ಇತ್ತು. ಈ ಪಂಪ್ ಮನಪಾ ಆಸ್ತಿಯಾಗಿದ್ದರೂ ಅದನ್ನು ಮನಪಾ ಒಪ್ಪಿಗೆಯಿಲ್ಲದೆ ಸ್ಥಳೀಯ ಮನಪಾ ಸದಸ್ಯರು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ಇದರಿಂದ ತುರ್ತಾಗಿ ಅಗ್ನಿ ಶಾಮಕ ವ್ಯವಸ್ಥೆಗೆ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಈ ಹಿಂದೆ ಪಚ್ಚನಾಡಿ ಕೇಂದ್ರದಲ್ಲಿ ೧೨.೫ ಕೋಟಿ ರೂ ವೆಚ್ಚದಲ್ಲಿ ಹಿಂದೆ ಸುಸಜ್ಜಿತ ಸಂಸ್ಕರಣಾ ಘಟಕದ ಡಿಪಿಆರ್ ಆಗಿದೆ. ಅದನ್ನು ಆಡಳಿತ ಪಕ್ಷ ಮುಂದುವರಿಸಿಲ್ಲ. ಪಚ್ಚನಾಡಿಯಲ್ಲಿ ರವಿವಾರ ಸಂಭವಿಸಿದ ಅಗ್ನಿ ದುರಂತಕ್ಕೆ, ಮತ್ತು ಅಗ್ನಿ ಶಾಮಕ ವ್ಯವಸ್ಥೆ ಇಲ್ಲದೆ ಇರುವುದಕ್ಕೆ ಆಡಳಿತದಲ್ಲಿರುವ ಬಿಜೆಪಿ ಪಕ್ಷ ಪ್ರಮುಖ ಕಾರಣ ಎಂದು ಮನಪಾ ವಿಪಕ್ಷ ನಾಯಕ ವಿನಯ ರಾಜ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯರಾದ ಕೇಶವ ಮರೋಳಿ, ಅನಿಲ್ ಕುಮಾರ್, ಜೆಸಿಂತಾ, ಪ್ರಕಾಶ್ ಸಾಲ್ಯಾನ್, ಝೀನತ್ ಸಂಶುದ್ಧೀನ್ ಮೊದಲಾದವರು ಉಪಸ್ಥಿತರಿದ್ದರು.