ಪಕ್ಷ ಹೇಳಿದರೆ ರಾಜೀನಾಮೆಗೆ ಸಿದ್ಧ

ನವದೆಹಲಿ,ಮೇ,೨- ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಯ ಹಿಂದೆ ’ತುಕ್ಡೆ ತುಕ್ಡೆ’ ಗ್ಯಾಂಗ್‌ಗಳ ಕೈವಾಡವಿದೆ ಎಂದು ಆರೋಪಿಸಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್, ನನ್ನ ಪಕ್ಷ ರಾಜೀನಾಮೆ ಕೇಳಿದರೆ ಕೊಡುತ್ತೇನೆ, ಗ್ಯಾಂಗ್ ಆಗ್ರಹಕ್ಕೆ ಮಣಿಯುವುದಿಲ್ಲ ಎಂದಿದ್ದಾರೆ.

ಲೈಂಗಿಕ ಕಿರುಕುಳದ ಆರೋಪ ಮಾಡಿ ಬ್ರಿಜ್ ಭೂಷಣ್ ಸಿಂಗ್ ಕ್ರಮಕ್ಕೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಹಲವಾರು ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರ ಬ್ರಿಜ್ ಭೂಷಣ್ ಸಿಂಗ್, “ನನ್ನ ಪಕ್ಷ ನನ್ನನ್ನು ರಾಜೀನಾಮೆ ನೀಡುವಂತೆ ಕೇಳಿದರೆ, ರಾಜೀನಾಮೆ ನೀಡುತ್ತೇನೆ. ನಾನು ಅವರ ಗುರಿಯಲ್ಲ, ಬಿಜೆಪಿ ಅವರ ಗುರಿ, ಮತ್ತು ಈ ಕ್ರೀಡಾಪಟುಗಳಿಗೆ ಹಣ ನೀಡಲಾಗುತ್ತದೆ ಎಂದು ಆರೋಪಿಸಿದ್ದಾರೆ.

ಈ ಪ್ರತಿಭಟನೆ ಶಾಹೀನ್ ಬಾಗ್‌ನಂತೆ ವಿಸ್ತರಿಸುತ್ತಿದೆ, ಉತ್ತರ ಪ್ರದೇಶ ಮತ್ತು ಹರಿಯಾಣವನ್ನು ವಿಭಜಿಸಲು ಬಯಸುತ್ತಾರೆ.
ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿದೆ ಮತ್ತು ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ ಮತ್ತು ಒಲಿಂಪಿಯನ್ ಬಜರಂಗ್ ಪುನಿಯಾ ಅವರ ಪಿತೂರಿ ಇದೆ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಶ್ಲಾಘಿಸಿದ್ದಾರೆ.

ಕುಸ್ತಿ ಪಟುಗಳಿಗೆ ಭದ್ರತೆ

ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೂರು ದಾಖಲಿಸಿರುವ ಎಲ್ಲಾ ಏಳು ಮಹಿಳಾ ಕುಸ್ತಿಪಟುಗಳಿಗೆ ದೆಹಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ..

ಸಿಂಗ್ ವಿರುದ್ಧ ಆರೋಪ ಮಾಡಿರುವ ಸಂತ್ರಸ್ತರಿಗೆ ಸೂಕ್ತ ಭದ್ರತೆ ಒದಗಿಸುವಂತೆ ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.ಅದರಂತೆ ಭದ್ರತೆ ಒದಗಿಸಲಾಗಿದೆ. ದೆಹಲಿ ಪೊಲೀಸರು ಎಲ್ಲಾ ಮಹಿಳಾ ಕುಸ್ತಿಪಟುಗಳನ್ನು ತನಿಖೆಗೆ ಸೇರಲು ಕರೆದಿದ್ದಾರೆ ಮತ್ತು ಅವರ ೧೬೧ ಸಿಆರ್‍ಪಿಸಿ ಅಡಿ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.