ಪಕ್ಷ ಸೂಚಿಸಿದಲ್ಲಿ ವಿಧಾನಸಭೆಗೆ ಸ್ಪರ್ಧೆ: ರುದ್ರೇಶ್

ಚಾಮರಾಜನಗರ, ಮಾ. 18-: ಪಕ್ಷ ಸೂಚಿಸಿದಲ್ಲಿ ಚಾಮರಾಜನಗರ ವಿಧಾಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಕೆಅರ್‍ಐಡಿಎಲ್ ಅಧ್ಯಕ್ಷ ರುದ್ರೇಶ್ ತಿಳಿಸಿದರು.
ನಗರದ ಸಿದ್ಧಾರ್ಥನಗರ ಬಡಾವಣೆಯಲ್ಲಿ ಟ್ರ್ಯಾಕ್ಟರ್ ಡೀಲರ್‍ಗಳು ಮತ್ತು ವಿತರಕರ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕಿನ ವಿವಿಧ ಗ್ರಾಮದ ರೈತರಿಗೆ ಟ್ರ್ಯಾಕ್ಟರ್ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷ ಸೂಚಿಸಿದಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಅವರು ತಿಳಿಸಿದರು.
ಯಡಿಯೂರಪ್ಪ ನಮ್ಮ ಪ್ರಶ್ನಾತೀತ ಅಗ್ರಗಣ್ಯ ನಾಯಕರು, ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು. ಅವರ ಬಗ್ಗೆ ಸೋಮಣ್ಣ ಹಾಗೂ ಅವರ ಪುತ್ರ ಏಕೆ ಮಾತನಾಡಿದರು ಎಂದು ತಿಳಿಯುತ್ತಿಲ್ಲ. ಸೋಮಣ್ಣ ಕೂಡ ನಮ್ಮ ನಾಯಕರು, ಹಿರಿಯರು ಶೀಘ್ರದಲ್ಲೇ ಸೋಮಣ್ಣರವರನ್ನು ಭೇಟಿ ಮಾಡಿ ವಿಚಾರಿಸುತ್ತೇನೆ ಎಂದು ಹೇಳಿದರು. ಪಕ್ಷ ಸಂಘಟನೆಯಲ್ಲಿ ಕುಂಠಿತಗೊಂಡಿರುವ ಕ್ಷೇತ್ರಗಳಲ್ಲಿ ಬಲವರ್ಧನೆಗೊಳಿಸಿ ಪಕ್ಷ ಅಧಿಕಾರಕ್ಕೆ ತರುವ ಗುರಿಯಿಂದ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ತಿಳಿಸಿದರು.
ಈಗಾಗಲೇ ಹಲವಾರು ಗ್ರಾಮಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುತ್ತೇನೆ. ಮುಂದೆಯೂ ಸಹ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕ್ಷೇತ್ರ ಪ್ರವಾಸ ಮಾಡುತ್ತೇನೆ ಎಂದರು.