ಪಕ್ಷ ಸಂಘಟನೆಗೆ ಯುವಮುಖಂಡರ ಜತೆ ಎಚ್‌ಡಿಕೆ ಚರ್ಚೆ

ಬೆಂಗಳೂರು, ಜ. ೪- ಜೆಡಿಎಸ್ ಪಕ್ಷ ಬಿಜೆಪಿ ಜತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ. ಜೆಡಿಎಸ್ ಸ್ವತಂತ್ರ ಪಕ್ಷವಾಗಿ ಅಸ್ತಿತ್ವ ಉಳಿಸಿಕೊಳ್ಳಲಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಇಂದು ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಜೆಡಿಎಸ್‌ನ ಯುವ ಹಾಗೂ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ.
ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್‌ನ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಪಕ್ಷ ಸಂಘಟನೆಯ ಈ ಸಭೆ ನಡೆದಿದ್ದು, ಜೆಡಿಎಸ್‌ನ ಯುವ ಘಟಕ ಹಾಗೂ ವಿದ್ಯಾರ್ಥಿ ಘಟಕದ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳು, ಮುಖಂಡರುಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾದ ನಂತರ ಜೆಡಿಎಸ್ ಪಕ್ಷದ ಅಸ್ತಿತ್ವದ ಬಗ್ಗೆ ನಾನಾ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಜೆಡಿಎಸ್ ಸ್ವತಂತ್ರವಾಗಿ ಪಕ್ಷವಾಗಿ ಅಸ್ತಿತ್ವ ಉಳಿಸಿಕೊಳ್ಳಲಿದೆ. ಯಾವ ಪಕ್ಷದೊಂದಿಗೂ ಮೈತ್ರಿಯಿಲ್ಲ. ಪಕ್ಷ ಸಂಘಟನೆಯತ್ತ ಗಮನ ಹರಿಸೋಣ ಎಂದು ಕುಮಾರಸ್ವಾಮಿ ಹೇಳಿದರು.
ಪಕ್ಷ ಕಟ್ಟುವಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳ ಸಕ್ರಿಯ ಪಾತ್ರಿ ಬಹುಮುಖ್ಯ. ಹಾಗಾಗಿ ಯುವಕರು ಹಾಗೂ ವಿದ್ಯಾರ್ಥಿ ಘಟಕ ಸಂಘಟನೆಯತ್ತ ಹೆಚ್ಚು ಗಮನ ನೀಡಿ ರಾಜ್ಯಾದ್ಯಂತ ಪಕ್ಷವನ್ನು ಬಲಪಡಿಸಲು ಯುವಕರು ಮುಂದಾಗುವಂತೆಯೂ ಅವರು ಹೇಳಿದರು.
ಜನವರಿ ೧೫ರ ನಂತರ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಕಾರ್ಯಕ್ರಮ ರೂಪಿಸಲಾಗಿದೆ. ಪೂರ್ವಭಾವಿಯಾಗಿ ಇಂದಿನ ಸಭೆ ನಡೆಸುತ್ತಿದ್ದೇವೆ. ಪಕ್ಷವನ್ನು ಬಲಪಡಿಸುವಲ್ಲಿ ಕೈಜೋಡಿಸಿ ಎಂದು ಅವರು ಯುವ ಮುಖಂಡರು ಹಾಗೂ ವಿದ್ಯಾರ್ಥಿ ಮುಖಂಡರುಗಳಿಗೆ ಹೇಳಿದರು.
ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಪಡಿಸಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಗುರಿಯೊಂದಿಗೆ ಪಕ್ಷವನ್ನು ಸಂಘಟಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇಂದಿನ ಈ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ, ಹಿರಿಯ ಮುಖಂಡರಾದ ಬಸವರಾಜ ಹೊರಟ್ಟಿ, ಕೋನರೆಡ್ಡಿ, ಬಂಡೆಪ್ಪ ಕಾಶಂಪೂರ್, ತಿಪ್ಪೇಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.