ಪಕ್ಷ ಸಂಘಟನೆಗೆ ಪವಾರ್ ಪ್ರವಾಸ

ಮುಂಬೈ, ಜು.೮- ಎನ್ ಸಿಪಿ ವರಿಷ್ಠ ಶರದ್ ಪವಾರ್ ಅವರು ಬೆಂಬಲವನ್ನು ಹೆಚ್ಚಿಸಿಕೊಳ್ಳಲು ಇಂದು ನಾಸಿಕ್ ನಿಂದ ರಾಜ್ಯಾದ್ಯಂತ ತಮ್ಮ ಪ್ರವಾಸವನ್ನು ಆರಂಭಿಸಲಿದ್ದಾರೆ.
ತಮ್ಮ ನಾಯಕತ್ವದ ವಿರುದ್ಧ ಬಂಡಾಯವೆದ್ದು ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರಕಾರಕ್ಕೆ ಸೇರ್ಪಡೆಗೊಂಡಿರುವ ಸೋದರಳಿಯ ಅಜಿತ್ ಪವಾರ್ ಅವರೊಂದಿಗಿನ ಅಧಿಕಾರದ ಹೋರಾಟದ ನಡುವೆ ಈ ಪ್ರವಾಸ ಕುತೂಹಲ ಕೆರಳಿಸಿದೆ.
೮೨ರ ಹರೆಯದ ಶರದ್ ಪವಾರ್ ಅವರು ಪಕ್ಷವನ್ನು ತಳಮಟ್ಟದಿಂದ ಪುನರ್ನಿರ್ಮಾಣ ಮಾಡುವ ಧ್ಯೇಯೋದ್ದೇಶವನ್ನು ಹೊಂದಿದ್ದಾರೆ. ಅವರು ನಾಸಿಕ್, ಪುಣೆ, ಸೊಲ್ಲಾಪುರ ಮತ್ತು ವಿದರ್ಭ ಪ್ರದೇಶದ ಕೆಲವು ಭಾಗಗಳಿಗೆ ಭೇಟಿ ನೀಡಲಿದ್ದಾರೆ. ಇವೆಲ್ಲವೂ ಛಗನ್ ಭುಜಬಲ್, ಧನಂಜಯ್ ಮುಂಡೆ ಹಾಗೂ ಇತರ ಬಂಡಾಯ ಎನ್ಸಿಪಿ ಶಾಸಕರ ಕ್ಷೇತ್ರಗಳಾಗಿವೆ.
ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣ ರಾಜ್ಯ ಸರ್ಕಾರಕ್ಕೆ ಸೇರ್ಪಡೆಗೊಂಡ ನಂತರ ಶಿವಸೇನೆ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳ ನಡುವೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿನ್ನೆ ಸಂಜೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಸತತ ಎರಡನೇ ದಿನ ಭೇಟಿಯಾದರು.
ನನಗೂ ’ಮುಖ್ಯಮಂತ್ರಿ ಆಗಬೇಕು’ ಎಂದು ಅಜಿತ್ ಪವಾರ್ ಹೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ಅಜಿತ್ ಪವಾರ್ ಅವರು ಪ್ರಸ್ತುತ ಶಿಂಧೆ ನೇತೃತ್ವದ ಸರಕಾರದಲ್ಲಿ ಫಡ್ನವಿಸ್ ಅವರೊಂದಿಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಂಡಿದ್ದಾರೆ.