ಪಕ್ಷ ವಿರೋಧಿ ಚಟುವಟಿಕೆ: ಬಿಜೆಪಿಯಿಂದ ಮಲ್ಲಿಕಾರ್ಜುನ ಖುಬಾ ಉಚ್ಛಾಟನೆ

ಬೀದರ:ಎ.18: ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಬಸವಕಲ್ಯಾಣದ ಮಾಜಿ‌ ಶಾಸಕ ಮಲ್ಲಿಕಾರ್ಜುನ ಖೂಬಾ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿ ಪಕ್ಷದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ ಆದೇಶಿಸಿದ್ದಾರೆ.

ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಅವರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ನಿಂತು ನಮ್ಮ ಪಕ್ಷದ ಶಿಸ್ತನ್ನು ಉಲ್ಲಂಘಿಸಿದಿರಿ. ಪಕ್ಷ ಎಲ್ಲ ರೀತಿಯ ಕೊನೆ ಗಳಿಗೆ ಪ್ರಯತ್ನ ನಡೆಸಿದರೂ ಸಹ ಕಣದಿಂದ ಹಿಂದೆ ಸರಿಯಲಿಲ್ಲ ಎಂದು ಖೂಬಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಪಕ್ಷದ ವಿರೋಧಿ ಚಟುವಟಿಕೆಗಾಗಿ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಉಚ್ಛಾಟನೆ ಪತ್ರ ನನ್ನ ಕೈಸೇರಿಲ್ಲ ಖೂಬಾ: ಬಿಜೆಪಿಯಿಂದ ಉಚ್ಛಾಟಿಸಿರುವ ಪತ್ರ ನನ್ನ ಕೈ ಸೇರಿಲ್ಲ’ ಎಂದು ಈ ಕ್ಷೇತ್ರದ ಉಪ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಆಗಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದ್ದಾರೆ.

ಅಲ್ಲದೆ ನನಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಪ್ರತಿಕ್ರಿಯಿಸುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದಾರೆ.

‘ಉಪಚುನಾವಣೆಯಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜತೆ ನನಗೂ ಬಹುಸಂಖ್ಯಾತ ಮತಗಳು ದೊರೆತಿವೆ. ಹೀಗಾಗಿ ಜಯದ ಭರವಸೆಯಿದೆ’ ಎಂದೂ ಖೂಬಾ ಹೇಳಿದ್ದಾರೆ.