ಪಕ್ಷ ಬಿಡುವವರ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ : ಶೆಟ್ಟರ್

ಹುಬ್ಬಳ್ಳಿ, ನ 28: ಪಕ್ಷ ಬಿಟ್ಟು ಹೋಗುತ್ತಿರುವವರನ್ನು ಉಳಸಿಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತೆ ಬಿಜೆಪಿ ಸೇರುತ್ತೇನೆ ಎಂಬುದು ಸುಳ್ಳು ಸುದ್ದಿ. ಸುಳ್ಳು ಸುದ್ದಿ ಹಬ್ಬಿಸಿ ಪಕ್ಷ ಬಿಟ್ಟು ಹೋಗುತ್ತಿರುವವರನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಚುನಾವಣಾ ಸಂದರ್ಭದಲ್ಲಿ ಇನ್ನೂ ಏನೇನು ಆಗುತ್ತದೆ ಕಾದು ನೋಡಿ ಎಂದರು.

ರಾಜ್ಯ ಬಿಜೆಪಿ ರಿಪೇರಿ ಮಾಡಲಾಗದಷ್ಟು ದುಸ್ಥಿತಿ ತಲುಪಿದೆ. ಹೀಗಾಗಿ ಬಿಜೆಪಿಯಲ್ಲಿ ಯಾರೇ ಅಧ್ಯಕ್ಷರಾದರೂ ಕೂಡಾ ರಿಪೇರಿ ಮಾಡಲಾಗದು ಎಂದ ಅವರು, ಅರವಿಂದ್ ಲಿಂಬಾವಳಿ, ಸೋಮಣ್ಣಾ ಸೇರಿದಂತೆ ಹಲವರು ಅಸಮಾಧಾನದ ಧ್ವನಿ ಎತ್ತಿದ್ದಾರೆ. ಧ್ವನಿ ಎತ್ತಿದವರ ಮನೆಗೆ ಹೋಗಿ ಬಂದರೆ ಎಲ್ಲವೂ ಸರಿ ಆಗುವುದಿಲ್ಲ. ಈಗಾಗಲೇ ಬಿಜೆಪಿ ಕಾರ್ಯಕರ್ತರು ನಮ್ಮದು ಲೀಡರ್ ಲೆಸ್ ಪಾರ್ಟಿ ಎಂದು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದರು.

ಜಾತಿ ಗಣತಿ ವಿಚಾರ ಕುರಿತಂತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಾತಿಗಣತಿ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಪಡೆಯಬೇಕು. ಅದರಲ್ಲಿ ಇರುವ ನ್ಯೂನ್ಯತೆ ಹೊರ ಹಾಕುವ ಪ್ರಯತ್ನ ಮಾಡಬೇಕು. ಎಲ್ಲಾ ವರ್ಗದ ಪ್ರಮುಖರೊಂದಿಗೆ ಮಾತನಾಡುವ ಅವಶ್ಯಕತೆ ಇದೆ ಎಂದರು.

ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಭ್ರೂಣ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರ್ರಾಮಾಣಿಕವಾಗಿ ತನಿಖೆ ನಡೆಸಲಾಗುತ್ತಿದೆ. ಎಲ್ಲರ ಮೇಲೆ ಸೂಕ್ತ ಕ್ರಮವಾಗಲಿ ಎಂದರು.