ಪಕ್ಷ ಬಿಡಲು ಕಿರುಕುಳ: ರಾಮ್ ದಾಸ್ ಆರೋಪ

ಮೈಸೂರು, ನ.೧೭-ತಮ್ಮನ್ನು ಪಕ್ಷದಿಂದ ಬಿಡಿಸಲು ಕಿರುಕುಳ ನೀಡುತ್ತಿದ್ದಾರೆ ಎಂದು ಶಾಸಕ ಎಸ್ ಎ ರಾಮದಾಸ್ ಪರೋಕ್ಷ ಅರೋಪ ಮಾಡಿದ್ದಾರೆ.ಗೋಲ್ ಗುಂಬಜ್ ಮಾದರಿಯ ತಂಗುದಾಣ ಭಾರೀ ವಿವಾದ ಹಾಗೂ ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ ರಾಮದಾಸ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ದಯಮಾಡಿ ಬಿಟ್ಟು ಬಿಡಿ ಎಂದು ಅಲವತ್ತುಕೊಂಡರು ನಾನು ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆ ಎಂದು ಹೇಳಿದರು.
ಬಿಜೆಪಿಯ ೧೧ ಜನ ಶಾಸಕರು ಇದ್ದರು. ಕಿರುಕುಳ ನೀಡಿ ೧೦ ಜನ ಬೇರೆ ಪಕ್ಷಕ್ಕೆ ಹೊರಟು ಹೋದರು. ಉಳಿದಿರುವವನು ನಾನೊಬ್ಬನೇ. ದಯಮಾಡಿ ನನ್ನನ್ನು ಬಿಟ್ಟು ಬಿಡಿ ಏನೂ ಪ್ರಶ್ನೆ ಕೇಳಬೇಡಿ ಎಂದು ಮಾಧ್ಯಮಗಳ ಮುಂದೆ ರಾಮದಾಸ್ ಕೈ ಮುಗಿದರು.ತಾವು ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ಮಾಡುತ್ತೇನೆ. ಪಾರ್ಕ್, ಸ್ಮಶಾನ ಅಭಿವೃದ್ಧಿ ನನ್ನ ಕನಸು. ಸಾಯುವ ಮುನ್ನ ಸಾಧನೆ ಮಾಡಬೇಕೆಂಬುದು ನಮ್ಮ ಗುರಿಯಾಗಿದೆ. ಈ ಬಗ್ಗೆ ಸಿಎಂ ಹಾಗೂಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಸಮಿತಿ ರಚಿಸಲು ಮನವಿ ಮಾಡಿದ್ದೇನೆ. ಸಮಿತಿ ಯಾವುದೇ ವರದಿ ಕೊಟ್ಟರೂ ಅದಕ್ಕೆ ನಾನು ಬದ್ಧ ಎಂದು ಸ್ಪಷ್ಟಪಡಿಸಿದರು.
ಹೊಸ ತಿರುವು
ಮೈಸೂರಿನ ವಿವಾದಿತ ಗುಂಬಜ್ ಮಾದರಿಯ ಬಸ್ ನಿಲ್ದಾಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.ರಾತ್ರೋರಾತ್ರಿ ಗುಂಬಜ್ ಬಣ್ಣವನ್ನೆ ಬದಲಾವಣೆ ಮಾದಲಾವಣೆ ಮಾಡಲಾಗಿದೆ. ಗೋಲ್ಡ್ ಕಲರ್ ಇದ್ದ ಗುಂಬಜ್ ಗೆ ಈಗ ಕೆಂಪು ಬಣ್ಣದ ಸ್ಪರ್ಶ ನೀಡಲಾಗಿದೆ.ಗುಂಬಜ್ ಮಾದರಿಯ ಬಸ್ ನಿಲ್ದಾಣದ ವಿವಾದ ತಾರಕಕ್ಕೇರುತ್ತಿದ್ದಂತೆ ಹಲವು ಬದಲಾವಣೆ ಮಾಡಲಾಗುತ್ತಲೆ ಇದೆ. ಮೊದಲು ಗುಂಬಜ್ ಗೆ ಗೋಲ್ಡ್ ಕಲರ್ ಹಾಕಲಾಗಿತ್ತು. ಆದರೆ ಈಗ ರಾತ್ರೋರಾತ್ರಿ ಗೋಲ್ಡ್ ಕಲರ್ ಮಾಸುವಂತೆ ಮಾಡಿ ಪೂರ್ಣ ಪ್ರಮಾಣದಲ್ಲಿ ಕೆಂಪು ಬಣ್ಣ ಬಳಿಯಲಾಗಿದೆ.ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ಕೊಟ್ಟಿರುವ ಹಿನ್ನೆಲೆ ರಾಮದಾಸ್ ಬಸ್ ನಿಲ್ದಾಣದಲ್ಲಿ ಹಲವು ಬದಲಾವಣೆ ಮಾಡುತ್ತಿದ್ದಾರೆ. ಇದರಿಂದ ರಾಮದಾಸ್ ಅವರು ಪ್ರತಾಪ್ ಸಿಂಹಗೆ ಹೆದರಿದ್ದರಾ ಎಂಬ ಅನುಮಾನ ಕಾಡುತ್ತಿದೆ.