ಪಕ್ಷ ಬಲವರ್ಧನೆ ಮೋದಿ ಸಲಹೆ

ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಕಾರ್ಯಕರ್ತರ ಜೊತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಗೋವಿಂದ ಕಾರಜೋಳ ಇದ್ದಾರೆ.

ಹುಬ್ಬಳ್ಳಿ, ಏ.೨೭- ಪಕ್ಷದ ಬೂತ್ ಮಟ್ಟದ ಸಶಕ್ತೀಕರಣಕ್ಕೆ ಆದ್ಯತೆ ನೀಡುವಂತೆ ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರು, ಬೂತ್ ಮಟ್ಟದಲ್ಲಿ ಸಾಧಿಸುವ ಗೆಲುವೇ ಪ್ರತಿ ಕ್ಷೇತ್ರದ ಗೆಲುವಿಗೆ ಕಾರಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಶ್ರೀನಿವಾಸ ಗಾರ್ಡನ್ ನಲ್ಲಿಂದು ನಡೆದ ಪ್ರಧಾನಿ ನರೇಂದ್ರ ಮೋದಿಯವರ ‘ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ’ (ವರ್ಚುಯಲ್ ಸಭೆ) ದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪ್ರಸಕ್ತ ಸ್ಥಿತಿಯಲ್ಲಿ ಅನುಸರಿಸಲಾಗುತ್ತಿರುವ ಚುನಾವಣಾ ರಣತಂತ್ರ, ಕರ್ನಾಟಕದ ಅಭಿವೃದ್ಧಿಗೆ ಹೆಚ್ಚು ಪೂರಕವಾಗಿದೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರೆಂದು ಅವರು ತಿಳಿಸಿದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ಡಬಲ್ ಇಂಜಿನ್ ಸರ್ಕಾರ ರೈತರು, ಬಡವರು, ಮಹಿಳೆಯರು ಸೇರಿದಂತೆ ವಿವಿಧ ವಲಯಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ.
ಕಿಸಾನ್ ಸಮ್ಮಾನ್ ಯೋಜನೆಯಡಿ ಕಳೆದ ೪ ವರ್ಷಗಳಲ್ಲಿ ೧೬ ಸಾವಿರ ಕೋಟಿ ರೂ.ಗಳನ್ನು ರೈತರ ಖಾತೆಗಳಿಗೆ ಹಾಕಲಾಗಿದ್ದು ಸುಮಾರು ೫೪ ಲಕ್ಷ ರೈತರು ಇದರ ಲಾಭ ಪಡೆದಿದ್ದಾರೆ.
ಸುಮಾರು ೬ ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ನಡೆಸಲಾಗಿದೆ ಎಂದು ಅವರು ನುಡಿದರು.
ಡಬಲ್ ಇಂಜಿನ್ ಸರ್ಕಾರದಿಂದಲೇ ಕರ್ನಾಟಕದ ಅಭಿವೃದ್ಧಿ ಸಾಧ್ಯ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಎಲ್ಲ ಸೇರಿ ಪ್ರಯತ್ನಿಸಬೇಕಿದ್ದು, ಜನತೆ ಆಶೀರ್ವದಿಸುತ್ತಾರೆಂಬ ವಿಶ್ವಾಸ ತಮಗಿದೆ ಎಂದು ಸಿ.ಎಂ. ಹೇಳಿದರು.