ಪಕ್ಷ ಬಲವರ್ಧನೆಗೆ ರಾಜ್ಯ ಪ್ರವಾಸ: ಬಿಎಸ್‌ವೈ

ಬೆಂಗಳೂರು, ಜು. ೧೮- ಪಕ್ಷ ಸಂಘಟನೆಗೆ ಸದ್ಯದಲ್ಲೇ ರಾಜ್ಯಾದ್ಯಂತ ಪ್ರವಾಸ ಆರಂಭಿಸುವುದಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿಂಗಳ ೨೧ಕ್ಕೆ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಸಮಾವೇಶ ನಡೆಯಲಿದೆ. ಆ ನಂತರ ರಾಜ್ಯದ ಎಲ್ಲ ಕಡೆ ಪ್ರವಾಸ ಆರಂಭಿಸುತ್ತೇನೆ ಎಂದರು.
ಎರಡು ದಿನಗಳ ಹಿಂದೆ ಬಿಜೆಪಿ ನಾಯಕರೆಲ್ಲ ಸೇರಿ ಚರ್ಚೆ ಮಾಡಿದ್ದೇವೆ. ೧೪೦ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಸಂಕಲ್ಪ ಹೊಂದಿದ್ದೇವೆ. ಖಂಡಿತವಾಗಲೂ ಈ ಗುರಿ ತಲುಪುವ ವಿಶ್ವಾಸ ಇದೆ ಎಂದರು.
ಪ್ರಧಾನ ಮೋದಿಯವರ ಕಾರ್ಯಕ್ರಮಗಳು ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮತದಾರರು ನಮ್ಮ ಜತೆ ಇದ್ದಾರೆ. ಜನ ಬೆಂಬಲ ಬಿಜೆಪಿ ಕಡೆಗೆ ಇದೆ ಎಂದು ಅವರು ಹೇಳಿದರು.
ಜನರ ಬೆಂಬಲದಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ. ೧೪೦ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು.
ಪಕ್ಷದ ಅಭ್ಯರ್ಥಿಗಳ ಪರ ಎಲ್ಲೆಡೆ ಪ್ರಚಾರ ಮಾಡುತ್ತೇನೆ. ಈಗಿನಿಂದಲೇ ಪ್ರಚಾರಕ್ಕೆ ತಯಾರಿ ನಡೆದಿದೆ ಎಂದು ಯಡಿಯೂರಪ್ಪ ಹೇಳಿದರು.