ಪಕ್ಷೇತರ ಅಭ್ಯರ್ಥಿ ಡಾ.ಕೆ.ಕೆಂಪರಾಜು ಮತ ಪ್ರಚಾರ

ಗೌರಿಬಿದನೂರು,ಮೇ.೩-ನಗರದ ಪ್ರಶಾಂತನಗರ, ರಾಮಲಿಂಗೇಶ್ವರ ಬಡಾವಣೆ, ನೆಹರೂಜಿ ಕಾಲೋನಿ, ವಿವಿ ಪುರಂ ಸೇರಿದಂತೆ ಇತರೆಡೆಗಳಲ್ಲಿ ಪಕ್ಷೇತರ ಅಭ್ಯರ್ಥಿ ಡಾ.ಕೆ.ಕೆಂಪರಾಜು ಚುನಾವಣಾ ಪ್ರಚಾರ ಸಭೆಗಳನ್ನು ಏರ್ಪಡಿಸಿದ್ದರು.
ಈ ವೇಳೆ ಮಾತನಾಡಿದ ಡಾ.ಕೆ.ಕೆಂಪರಾಜು, ಕ್ಷೇತ್ರದಲ್ಲಿ ಕಳೆದ ೪ ವರ್ಷಗಳಿಂದಲೂ ಜನರ ಸಂಕಷ್ಟಗಳನ್ನು ಅರಿತು ಹಂತಹಂತವಾಗಿ ಪರಿಹಾರೋಪಾಯಗಳನ್ನು ಕಲ್ಪಿಸುತ್ತಾ ಬಂದಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ಅಭಿಮಾನದಿಂದಾಗಿ ಸ್ಥಳೀಯ ಗ್ರಾ.ಪಂ ಚುನಾವಣೆಯಲ್ಲಿ ೧೦೦ ಕ್ಕೂ ಹೆಚ್ಚು ಸದಸ್ಯರ ಬಲವನ್ನು ಪಡೆಯಲು ಸಾಧ್ಯವಾಯಿತು. ಕೊರೋನ ಸಂಕಷ್ಟದ ಸಮಯದಲ್ಲಿ ಬಡ, ಮಧ್ಯಮ ಮತ್ತು ಕೂಲಿ ಕಾರ್ಮಿಕರ ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಆಹಾರದ ಕಿಟ್ ಗಳನ್ನು ಮನೆಮನೆಗೆ ತಲುಪಿಸಲಾಗಿದೆ. ಕ್ಷೇತ್ರದ ಜನರ ಆರೋಗ್ಯದ ದೃಷ್ಟಿಯಿಂದ ಸುಮಾರು ೬ ಆಂಬ್ಯುಲೆನ್ಸ್ ಗಳನ್ನು ಉಚಿತವಾಗಿ ಸೇವೆ ಮಾಡಲು ಅವಕಾಶ ನೀಡಲಾಗಿತ್ತು.
ಅಂಗವಿಕಲರು, ಮಹಿಳೆಯರು, ಯುವಕರು, ರೈತರು ಸೇರಿದಂತೆ ಇತರ ವರ್ಗದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದೇವೆ. ಪ್ರತೀ ಹೋಬಳಿ ಮಟ್ಟದಲ್ಲಿ ಉಚಿತ ಕಂಪ್ಯೂಟರ್, ಹೊಲಿಗೆಯಂತ್ರ, ಬ್ಯೂಟೀಷಿಯನ್ ಸೇರಿದಂತೆ ಇತರ ತರಬೇತಿಗಳನ್ನು ನೀಡುವ ಮೂಲಕ ಅವರ ಬದುಕಿಗೆ ಆಸರೆಯಾಗಿದ್ದೇವೆ. ನಿಮ್ಮೆಲ್ಲರ ಆಶೀರ್ವಾದವನ್ನು ಪಡೆಯುವ ನಿಟ್ಟಿನಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ತಮ್ಮ ಅಮೂಲ್ಯವಾದ ಮತವನ್ನು ನೀಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕಾಗಿದೆ. ಭವಿಷ್ಯದಲ್ಲಿ ನೀವು ನೀಡುವ ಜವಾಬ್ದಾರಿಯನ್ನು ನಿಷ್ಠೆಯಿಂದ ಪಾಲಿಸುವ ಕರ್ತವ್ಯ ನನ್ನದಾಗಿದೆ ಎಂದು ಹೇಳಿದರು.