ಪಕ್ಷೇತರ ಅಭ್ಯರ್ಥಿಯಾಗಿ ಆರ್.ಡಿ.ಪಾಟೀಲ್ 17 ರಂದು ನಾಮಪತ್ರ ಸಲ್ಲಿಕೆ

ಅಫಜಲಪುರ:ಎ.7: ನಾವು ಈ ಹಿಂದೆ ತೀರ್ಮಾನ ಮಾಡಿದಂತೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು 17ರಂದು ಸಲ್ಲಿಸಲಾಗುವುದು ಎಂದು ಆರ್.ಡಿ.ಪಾಟೀಲ್ ಸಹೋದರ ಮಹಾಂತೇಶ್ ಪಾಟೀಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಜನಾರ್ಧನ್ ರೆಡ್ಡಿ ಅವರನ್ನು ಸಂಪರ್ಕಿಸಿದಾಗ ಅಫಜಲಪುರ ಮತಕ್ಷೇತ್ರದಿಂದ ನಿಮಗೆ ಟಿಕೆಟ್ ನೀಡುತ್ತೇನೆ. ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿದಾಗ ಏಪ್ರಿಲ್ 10ರಂದು ಬೃಹತ್ ಸಮಾವೇಶ ಮಾಡಲು ನಾವು ಮುಂದಾದೆವು. ಆಗ ಕೆಲವು ಕಾಣದ ಕೈಗಳು ಅವರಿಗೆ ಕಿವಿ ತುಂಬಿ ಟಿಕೆಟ್ ನೀಡದಂತೆ ಒತ್ತಡ ಹಾಕಿದ್ದಾರೆ. ಇದರಿಂದಾಗಿ ಜನಾರ್ದನ್ ರೆಡ್ಡಿ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಾವು ಅವರನ್ನು ಮತ್ತೆ ಸಂಪರ್ಕಿಸಿದಾಗ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಆದ್ದರಿಂದ ಮತಕ್ಷೇತ್ರದ ಜನಾಭಿಪ್ರಾಯದ ಒತ್ತಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಾಗುವುದು.

ಏಪ್ರಿಲ್ 17ರಂದು ಬಸವೇಶ್ವರ ವೃತ್ತದಿಂದ ನ್ಯಾಷನಲ್ ಫಂಕ್ಷನ್ ಹಾಲ್ ವರೆಗೆ ಬೃಹತ್ ರಾಲಿ ನಡೆಸಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಪಾಟೀಲ್ ಅಳ್ಳಗಿ, ಲಕ್ಷ್ಮಿ ಪುತ್ರ ಜಮಾದಾರ, ಹೀರು ರಾಠೋಡ್, ಲಕ್ಕಪ್ಪ ಪುಜಾರಿ, ರಮೇಶ ಸೂಲೇಕರ, ಅಂಬಣ್ಣಾ ನರಗೋದಿ, ರಮೇಶ ಕೋರಳ್ಳಿ, ನಾಗೇಶ ಮೂರಮನ, ಹಣಮಂತ ಬಕ್ಕದ ಇತರರು ಉಪಸ್ಥಿತರಿದ್ದರು.