
ಕಲಬುರಗಿ:ಮಾ.19: ಪಕ್ಷಿಗಳು ವಿವಿಧ ಪ್ರಕಾರದ ಕೀಟ, ಹುಳ-ಹುಪ್ಪಟಿಗಳನ್ನು ಭಕ್ಷಿಸುವ ಮೂಲಕ ಮಣ್ಣು ಮತ್ತು ಬೆಳೆಗಳನ್ನು ರಕ್ಷಿಸುತ್ತವೆ. ಇದರಿಂದ ಮಣ್ಣು ಸತ್ವಯುತವಾಗಿ, ಪರಾಗಸ್ಪರ್ಷ ಕ್ರಿಯೆ ಜರುಗುವುದರಿಂದ ಉತ್ತಮ ಇಳುವರಿ ಸಾಧ್ಯ. ಜೊತೆಗೆ ಗಿಡ-ಮರಗಳು ಸಮೃದ್ಧವಾಗಿ ಬೆಳೆಯುವ ಮೂಲಕ ಪರಿಸರ ಸಮತೋಲ ಕಾಪಾಡಲು ಪಕ್ಷಿಗಳು ಪರೋಕ್ಷವಾಗಿ ಕಾರಣವಾಗಿವೆ. ಆದ್ದರಿಂದ ಪಕ್ಷಿ ಸಂಕುಲದ ಸಂರಕ್ಷಣೆ ಮಾಡುವುದು ತುಂಬಾ ಅಗತ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ಹೈಕೋರ್ಟ್ ರಿಂಗ್ ರಸ್ತೆಯ ನವಲದಿ ಬಡಾವಣೆಯ ಶಂಕ್ರೆಪ್ಪ ಹೊಸದೊಡ್ಡಿ ಅವರ ‘ಪುತಳಾಬಾಯಿ ನಿಲಯ’ದ ಪ್ರಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಗುಬ್ಬಚ್ಚಿ ದಿನಾಚರಣೆ’ ಪ್ರಯುಕ್ತ ಮುಚ್ಚಳಿಕೆಯಲ್ಲಿ ಗುಬ್ಬಿ ಸೇರಿದಂತೆ ವಿವಿಧ ಪಕ್ಷಿಗಳಿಗೆ ನೀರು, ಕಾಳುಗಳನ್ನು ಇಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿ ಜೀವಪರ ಕಾಳಜಿ ಅಗತ್ಯವಾಗಿದೆ. ಪ್ರಾಣಿ-ಪಕ್ಷಿಗಳ ಅಸ್ಥಿತ್ವದ ಮಹತ್ವ ಅರಿತು, ಅವುಗಳ ರಕ್ಷಣೆಗೆ ಮುಂದಾಗಬೇಕೆಂದು ಹೇಳಿದರು.
ಪಕ್ಷಿಪ್ರೇಮಿ, ಉಪನ್ಯಾಸಕ ಶಂಕ್ರೆಪ್ಪ ಹೊಸದೊಡ್ಡಿ ಮಾತನಾಡಿ, ಗುಬ್ಬಚ್ಚಿಗಳು ಸೇರಿದಂತೆ ಅನೇಕ ಪ್ರಾಣಿ-ಪಕ್ಷಿಗಳು ಇಂದು ಕಾಣೆಯಾಗುತ್ತಿವೆ. ಮನೆ ಅಂಗಳ, ಮೇಲ್ಭಾವಣಿಯಲ್ಲಿ ನೀರು, ಕಾಳುಗಳನ್ನಿಟ್ಟರೆ, ಪಕ್ಷಿಗಳಿಗೆ ತುಂಬಾ ಅನಕೂಲವಾಗುತ್ತದೆ. ಕೇವಲ ಮಾನವರಷ್ಟೇ ಬದುಕಿದರೆ ಸಾಲದು. ಬದಲಿಗೆ ಸಕಲ ಜೀವರಾಶಿಗಳು ಉಳಿಯಬೇಕು. ಪ್ರತಿಯೊಬ್ಬರಲ್ಲಿ ಮಾನವೀಯತೆ ಗುಣ ಬೆಳೆಸಿಕೊಳ್ಳಬೇಕು. ಈ ಪ್ರದೇಶದಲ್ಲಿ ಗುಬ್ಬಿ ಹಾಗೂ ಮತ್ತಿತರ ಪಕ್ಷಿಗಳ ಚಲನೆಯನ್ನು ಕಂಡು ಅವುಗಳಿಗಾಗಿ ಅನೇಕ ಮುಚ್ಚಳಿಕೆಗಳನ್ನು ಇಟ್ಟು, ಅದರಲ್ಲಿ ನಿರಂತರವಾಗಿ ಕಾಳು, ನೀರು ಇರುವಂತೆ ನೋಡಲಾಗುತ್ತದೆ. ದಿನಾಲು ಬೆಳೆಗ್ಗೆ, ಸಾಯಂಕಾಲ ಅನೇಕ ಪಕ್ಷಿಗಳು ಆಗಮಿಸಿ ಕಾಳನ್ನು ತಿಂದು, ನೀರನ್ನು ಕುಡಿಯುವುದು ಕಂಡರೆ ನಮಗೆ ತುಂಬಾ ಸಂತೋಷವಾಗುತ್ತದೆ ಎಂದರು.
ಶಿವಯೋಗಪ್ಪ ಬಿರಾದಾರ, ಸುಷ್ಮಾ ಎಸ್.ಹೊಸದೊಡ್ಡಿ, ಸಿಂಚನಾ, ಆರೂಷಿ, ಶಿವಪ್ಪ ಕೋಟೆ, ನಿರಂಜನ ತೇಲಿ ಸೇರಿದಂತೆ ಮತ್ತಿತರರಿದ್ದರು.