ಪಕ್ಷಿ ಸಂಕುಲಗಳಿಂದ ಪರಿಸರ ಸಮತೋಲನ

??????

ಕಲಬುರಗಿ:ಜ.5: ಪಕ್ಷಿಗಳು ವಿವಿಧ ಪ್ರಕಾರದ ಕೀಟ, ಹುಳ-ಹುಪ್ಪಟಿಗಳನ್ನು ಭಕ್ಷಿಸುವ ಮೂಲಕ ಮಣ್ಣು ಮತ್ತು ಬೆಳೆಗಳನ್ನು ರಕ್ಷಿಸುತ್ತವೆ. ಇದರಿಂದ ಮಣ್ಣು ಸತ್ವಯುತವಾಗುತ್ತದೆ. ಪರಾಗಸ್ಪರ್ಷ ಕ್ರಿಯೆ ಜರುಗುವುದರಿಂದ ಉತ್ತಮ ಇಳುವರಿ ಸಾಧ್ಯ. ಜೊತೆಗೆ ಗಿಡ-ಮರಗಳು ಸಮೃದ್ಧವಾಗಿ ಬೆಳೆಯುವ ಮೂಲಕ ಪರಿಸರ ಸಮತೋಲನವಾಗಿಡಲು ಪಕ್ಷಿಗಳು ಕಾರಣವಾಗಿವೆ. ಆದ್ದರಿಂದ ಪಕ್ಷಿ ಸಂಕುಲದ ರಕ್ಷಣೆ ತುಂಬಾ ಅಗತ್ಯವಾಗಿದೆಯೆಂದು ಉಪ ವಲಯ ಅರಣ್ಯ ಅಧಿಕಾರಿ ಮಲ್ಲಿಕಾರ್ಜುನ ಎಚ್.ಜಮಾದಾರ ಅಭಿಮತ ವ್ಯಕ್ತಪಡಿಸಿದರು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿನ ಕಿರು ಮೃಗಾಲಯದಲ್ಲಿ ಅರಣ್ಯ ಇಲಾಖೆ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಜಿಲ್ಲಾ ಕಿರು ಮೃಗಾಲಯ ಮತ್ತು ಮಕ್ಕಳ ಉದ್ಯಾನವನ, ‘ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳು ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ಕಿರು ಮೃಗಾಲಯದಲ್ಲಿ ಏರ್ಪಡಿಸಲಾಗಿದ್ದ ‘ರಾಷ್ಟ್ರೀಯ ಪಕ್ಷಿಗಳ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಪರಿಸರ ವ್ಯವಸ್ಥೆಯಲ್ಲಿ ಪಕ್ಷಿಗಳ ಪಾತ್ರ ಪ್ರಮುಖವಾಗಿದೆ. ಪರಿಸರ ಸ್ಥಿತಿಯ ಪ್ರಮುಖ ಸೂಚಕಗಳು. ಇವುಗಳು ಪ್ರಮುಖವಾಗಿ ಜೈವಿಕ ಕೀಟನಾಶಕಗಳಾಗಿ ಕಾರ್ಯನಿರ್ವಹಿಸುತ್ತವೆ. ಪ್ರಕೃತಿಯಯ ಸಮತೋಲನ ಭಾಗವಾಗಿವೆ. ಅರಣ್ಯ ನಾಶ, ಜೀವ ವೈವಿಧ್ಯತೆಯಲ್ಲಿ ಏರು-ಪೇರು, ಮೋಬೈಲ್ ತರಂಗಗಳು, ಜಾಗತಿಕ ತಾಪಮಾನ, ಬೇಟೆ ಸೇರಿದಂತೆ ಮುಂತಾದ ಕಾರಣಗಳಿಂದ ಇಂದು ಅನೇಕ ಪಕ್ಷಿಗಳು ಕಣ್ಮರೆಯಾಗುತ್ತಿವೆ. ಆದ್ದರಿಂದ ಪಕ್ಷಿಗಳನ್ನು ಸಂರಕ್ಷಿಸಬೇಕಾಗಿದೆ ಎಂದು ಹೇಳಿದರು.
ಕಿರು ಮೃಗಾಲಯ ಮತ್ತು ಮಕ್ಕಳ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರಾದ ಸಂತೋಷಕುಮಾರ ಕೆಂಚಪ್ಪನವರ್ ಮಾರ್ಗದರ್ಶನ, ಸಹಾಯಕ ಅರ್ಯಣ ಸಂರಕ್ಷಣಾಧಿಕಾರಿ ಸುನೀಲಕುಮಾರ ಚವ್ಹಾಣ ಸಲಹೆಯೊಂದಿಗೆ ಜರುಗಿದ ಕಾರ್ಯಕ್ರಮದಲ್ಲಿ ಆರ್.ಎಫ್.ಓ ಭೀಮರಾಯ ಶಿಳ್ಳೆಕ್ಯಾತ್, ಅರಣ್ಯ ರಕ್ಷಕ ಕಾಂತಪ್ಪ ಪೂಜಾರಿ, ಪ್ರಾಣಿ ಪಾಲಕ ಸದಾನಂದ ಶಿರವಾಳ, ಅರಣ್ಯ ವೀಕ್ಷಕಿ ಶಿವಲೀಲಾ ತೆಗನೂರ, ಕಾವಲುಗಾರ ತಾರಾನಾಥ, ಪ್ರಮುಖರಾದ ಎಂ.ಬಿ.ನಿಂಗಪ್ಪ, ಶಿವಯೋಗಪ್ಪ ಬಿರಾದಾರ, ಧೂಳಪ್ಪ ದ್ಯಾಮನಕರ್, ಬಿ.ಶಿವಶಂಕರ್, ಅಕ್ಷಯಕುಮಾರ ಚಿಂಚನಸೂರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.