ಪಕ್ಷಿ ಸಂಕುಲಕ್ಕೆ ಮಿಡಿದ ಜನರಮನ

ದೇವದುರ್ಗ.ಏ.೦೧-ಬೇಸಿಗೆಯ ಕೆಂಡದಂಥ ಉರಿಬಿಸಿಲು ಜೀವ ಸಂಕುಲಕ್ಕೆ ಜಲದಾಹ ಹೆಚ್ಚಿಸಿದ್ದು, ಅದರಲ್ಲೂ ಪ್ರಾಣಿ-ಪಕ್ಷಿಗಳು ಜೀವಜಲಕ್ಕಾಗಿ ಬಿಕ್ಕಳಿಸುತ್ತಿವೆ. ಪಕ್ಷಿಗಳ ಅರಣ್ಯರೋಧನೆ ಅರಿತ ತಾಲೂಕಿನ ಯುವಕರು ಅವುಗಳ ದಾಹ ನೀಗಿಸಲು ಮುಂದಾಗಿದ್ದಾರೆ.
ಹಿರೇಬೂದೂರಿನಲ್ಲಿ ನಾಲ್ಕೈದು ಯುವಕರು ಹಾಗೂ ಗಬ್ಬೂರಿನಲ್ಲಿ ಸುಮಾರು ೩೫ಯುವಕರು ಪಕ್ಷಿಗಳಿಗೆ ಆಸರೆಯಾಗಿದ್ದಾರೆ. ಬಿಸಿಲತಾಪಕ್ಕೆ ನದಿ, ಹಳ್ಳ, ಕೆರೆಗಳಲ್ಲಿ ನೀರು ಕಡಿಮೆಯಾಗಿದ್ದು, ಹೀಗಾಗಿ ಪಕ್ಷಿಗಳು ಆಹಾರ ಹಾಗೂ ನೀರಿಗಾಗಿ ಊರೂರು ಅಲೆದು ಕೃಷ್ಣಾ ನದಿ ಸುತ್ತ ಗಿರಿಕಿ ಹೊಡೆಯುತ್ತಿವೆ. ಇಂಥ ಪರಿಸ್ಥಿತಿ ಅರಿತ ಹಿರೇಬೂದೂರಿನ ಕಾಸಿಂಸಾಬ್ ಎಳ್ಳುಮನೆ, ತಮ್ಮ ಮನೆಯನ್ನೇ ಪಕ್ಷಿಧಾಮ ಮಾಡಿಕೊಂಡಿದ್ದಾರೆ.
ಪಕ್ಷಿಗಳ ಪೋಷಣೆಗಾಗಿ ಮನೆ ವಠಾರದಲ್ಲಿ ಗಿಡಗಳಿಗೆ ಆಹಾರಧಾನ್ಯ, ನೀರಿನ ತೊಟ್ಟಿ ನಿರ್ಮಿಸಿದ್ದಾರೆ. ಪಕ್ಷಿಗಳು ಮೊಟ್ಟೆ, ಮರಿ ಹಾಕಲು ವಸತಿ ಸೌಲಭ್ಯವೂ ಕಲ್ಪಿಸಿದ್ದಾರೆ. ಆಹಾರ, ನೀರು ಹಾಗೂ ವಸತಿ ಸೌಲಭ್ಯವೂ ಒಂದೇ ಕಡೆ ಲಭ್ಯವಾಗಿದ್ದರಿಂದ ಕಾಸಿಂಸಾಬ್ ಎಳ್ಳಿಮನೆ ಗುಬ್ಬಚ್ಚಿ ಗುಡಾಗಿ ಬದಲಾಗಿದ್ದು, ಚಿಲಿಪಿಲಿಗಳ ಕಲವರ ಮನೆ ಮಾಡಿದೆ.
ಅಡುಗೆ ಎಣ್ಣೆಯ ಡಬ್ಬಿಯನ್ನು ೪ಭಾಗಗಳಾಗಿ ಅರ್ಧಕ್ಕೆ ಕತ್ತರಿಸಿದ್ದಾರೆ. ಆಯಾ ಪಕ್ಷಿಗಳ ಆಹಾರದ ರುಚಿಯನ್ನು ಗಮನಿಸಿ ೪ಭಾಗದಲ್ಲಿ ಒಂದೊಂದು ನಮೂನೆ (ಜೋಳ, ಹೆಸರು, ಅಕ್ಕಿ, ಕಡಲೆ) ಕಾಳುಕಡ್ಡಿ ಹಾಕಿದ್ದಾರೆ. ಡಬ್ಬಿ ಮಧ್ಯೆ ಭಾಗದಲ್ಲಿ ನೀರು ಸಂಗ್ರಹಿಸಿದ್ದಾರೆ. ಪಕ್ಷಿಗಳು ಆಹಾರ, ನೀರು ಪಡೆದು ಮನೆಯಲ್ಲೇ ನೆಲೆಸಿವೆ.
ಮನೆ ಛಾವಣಿ ಕೆಳಗೆ ೬, ೮ಇಂಚಿನ ಪೈಪ್‌ಗಳನ್ನು ಅಳವಡಿಸಿದ್ದಾರೆ. ಅಲ್ಲಲ್ಲಿ ಕತ್ತರಿಸಿ ಪಕ್ಷಿಗಳ ಪ್ರವೇಶ ಕಲ್ಪಿಸಿ, ಪೈಪ್ ಒಳಗಡೆ ಭತ್ತದ ಹುಲ್ಲು ಸೇರಿ ಇತರ ಪಕ್ಷಿಗಳು ವಾಸಿಸುವ ಪದ್ಧತಿ ಅನುಸಾರ ಕಸಕಡ್ಡಿ ಸಂಗ್ರಹಿಸಿದ್ದಾರೆ. ಹಲವು ಪಕ್ಷಿಗಳು ಇಲ್ಲೇ ನೆಲಸಿ ಸಂತಾನೋತ್ಪತ್ತಿ ಮಾಡಿಕೊಳ್ಳುತ್ತಿವೆ. ಇದೇ ಮಾದರಿಯನ್ನು ಗ್ರಾಮದ ಯುವಕರು ಅಳವಡಿಸಿಕೊಳ್ಳುತ್ತಿದ್ದು, ನಾಲ್ಕೈದು ಯುವಕರು ಫಾಲೋ ಮಾಡುತ್ತಿದ್ದಾರೆ.
ಸೆಲ್ಫಿ ವಿತ್ ಅರವಟಿಗೆ:
ಗಬ್ಬೂರಿನಲ್ಲಿ ಯುವಬ್ರಿಗೇಡ್ ಸಂಘಟನೆ ಯುವಕರು ಸೆಲ್ಫಿವಿತ್ ಅರವಟಿಗೆ ಅಭಿಯಾನ ಆರಂಭಿಸಿದ್ದು, ಪ್ರತಿಮನೆಯಲ್ಲಿ ಪಕ್ಷಿಗಳಿಗೆ ನೀರು, ಆಹಾರ ಧಾನ್ಯವಿಟ್ಟು ಸೆಲ್ಫಿ ತೆಗೆದು ಶೇರ್ ಮಾಡುತ್ತಿದ್ದಾರೆ. ಸುಮಾರು ೩೫ಕ್ಕೂ ಹೆಚ್ಚು ಯುವಕರು ತಿಂಗಳಿನಿಂದ ಸರ್ಕಾರಿ ಪ್ರೌಢಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಬೆಳೆಸಿದ ಗಿಡಗಳಿಗೆ ನೀರಿನ ಬಾಟಲ್ ಹಾಕುತ್ತಿದ್ದರೆ. ೧೦೦ಕ್ಕೂ ಹೆಚ್ಚು ಮಣ್ಣಿನ ಮುಚ್ಚಳಿಕೆ, ಪ್ಲಾಸ್ಟಿಕ್ ಬಾಟಲ್‌ಗಳನ್ನು ವೈಜ್ಞಾನಿಕವಾಗಿ ಜೋಡಣೆ ಮಾಡಿ ಅಳವಡಿಸುತ್ತಿದ್ದಾರೆ. ಪ್ರತಿಮನೆ ಮಹಡಿ ಮೇಲೆ ಎರಡು ಬಾಟಲ್ ಇಡುವ ಗುರಿಹೊಂದಿದ್ದಾರೆ. ಅಭಿಯಾನಕ್ಕೆ ವೈದ್ಯರು, ಶಿಕ್ಷಕರು, ಖಾಸಗಿ ಉದ್ಯಮಿಗಳೂ ಕೈಜೋಡಿಸಿದ್ದಾರೆ.

ಕೋಟ್=============
ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳದ್ದು ಅರಣ್ಯರೋಧನ. ಆಹಾರ, ನೀರಿಗಾಗಿ ಊರೂರು ಅಲೆಯುತ್ತಿವೆ. ಇದನ್ನು ಅರ್ಥ ಮಾಡಿಕೊಂಡು ನನ್ನ ಮನೆಯಲ್ಲೇ ಗೂಡು ನಿರ್ಮಿಸಿ, ನೀರು, ಆಹಾರ ಸೌಲಭ್ಯ ಕಲ್ಪಿಸಿದ್ದೇನೆ. ಯುವಕರು ನನ್ನ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
| ಕಾಸಿಂಸಾಬ್ ಎಳ್ಳುಮನೆ
ಪಕ್ಷಿಪ್ರೇಮಿ ಹಿರೇಬೂದೂರು