ಪಕ್ಷಿಗಳ ಅಕ್ರಮ ಮಾರಾಟ ಯತ್ನ: ಆರೋಪಿ ಸೆರೆ

ಕಲಬುರಗಿ:ಜ.12:ಸಾಕು ಪಕ್ಷಿಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಬಂಧಿಸಿದ ಘಟನೆ ನಗರದ ಸೂಪರ್ ಮಾರ್ಕೆಟ್‍ನ ಸಂಗಮ್ ಚಿತ್ರಮಂದಿರದ ಬಳಿಯಲ್ಲಿನ ಪೇಟ್ ಶಾಪ್‍ನಲ್ಲಿ ವರದಿಯಾಗಿದೆ.
ಬಂಧಿತನಿಗೆ ನಗರದ ಹೊರವಲಯದ ಹಾಗರಗಾ ರಸ್ತೆಯಲ್ಲಿರುವ ಇತಿಯಾತ್ ಕಾಲೋನಿಯ ವ್ಯಾಪಾರಿ ಹಾಜಿಪಾನ್ ತಂದೆ ಖಾಸಿಂಖಾನ್ ಪಠಾಣ್ (50) ಎಂದು ಗುರುತಿಸಲಾಗಿದೆ. ಬಂಧಿತನಿಂದ ಆಮೆ, ಗಿಳಿ, ಕೌಜುಗ ಪಕ್ಷಿಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ಹುಣಚಿರಾವ್ (ಕೇಶವ್) ಮೋಟಗಿ ಅವರು ನೀಡಿದ ಸೂಚನೆಯ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನೀಲಕುಮಾರ್ ಚವ್ಹಾಣ್, ಸಹಾಯಕ ಅರಣ್ಯ ಸಂರಕ್ಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ, ಆತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.