ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸಿ: ಬೂಕಹಳ್ಳಿ ಮಂಜು ಮನವಿ

ಕೆ.ಆರ್.ಪೇಟೆ.ನ.28: ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರು ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸುವ ಮೂಲಕ ಗೆಲುವಿಗೆ ಸಹಕಾರ ನೀಡಬೇಕೆಂದು ವಿಧಾನ ಪರಿಷತ್ತಿನ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಮನವಿ ಮಾಡಿದರು.
ಪಟ್ಟಣದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡರ ನಿವಾಸದ ಆವರಣದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.
ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲ್ಲೋಕೆ ಸಾಧ್ಯನಾ ಎಂಬ ಮಾತುಗಳಿದ್ದವು ಇದು ರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಯಿತು. ಅಂತಹದರಲ್ಲಿ ನಾರಾಯಣಗೌಡರು ಗೆಲ್ಲುವ ಮೂಲಕ ತಾಲೂಕಿನಲ್ಲಿ ಕಮಲ ಅರಳಿಸಿ ಇತಿಹಾಸವನ್ನು ಸೃಷ್ಠಿಸಿದರು. ಈಗ ಸಚಿವರ ನೇತೃತ್ವದಲ್ಲಿ ನಾನು ಗೆಲ್ಲುವುದು ನಿಶ್ಚಿತ. ನೂರಕ್ಕೆ ನೂರು ಸತ್ಯ ಮಂಡ್ಯದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಸಚಿವರ ಮೇಲೆ ಜಿಲ್ಲೆಯ ಜನರು ವಿಶ್ವಾಸವಿಟ್ಟಿದ್ದಾರೆ. ಅವರ ಜನಸ್ಪಂದನಾ ಕಾರ್ಯವೈಖರಿ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಚುನಾವಣೆ ಕಡೆ ಎರಡು ದಿನಗಳಲ್ಲಿ ಇರಲ್ಲವೆಂದು ವಿರೋಧಿಗಳು ಅಪಪ್ರಾಚಾರ ಮಾಡುತ್ತಿದ್ದಾರೆ ಇದಕ್ಕೆ ಕಾರ್ಯಕರ್ತರು ಕಿವಿಗೊಡಬಾರದು. ನನ್ನ ಜತೆ ರಾಜ್ಯ, ಕೇಂದ್ರ ಸರ್ಕಾರವಿದೆ. ಚುನಾವಣೆ ಸಚಿವರ ನೇತೃತ್ವದಲ್ಲಿ ನಡೆಯುತ್ತಿದೆ ನಾನು ಎದೆಗುಂದುವುದಿಲ್ಲ ಎದೆ ಚಾಚಿ ನಿಲ್ಲುತ್ತೇನೆ. ಇವತ್ತು ಅಪಪ್ರಚಾರ ಮಾಡುತ್ತಿರುವ ವಿರೋಧಿಗಳು ಕಡೆ ಎರಡು ದಿನಗಳಲ್ಲಿ ಕಣದಲ್ಲಿ ಉಳಿಯುವುದಿಲ್ಲ. ಚುನಾವಣೆಗಳ ಕಾರ್ಯತಂತ್ರ ರೂಪಿಸುವುದರಲ್ಲಿ ಸಚಿವರಿಗೆ ಸರಿಸಾಟಿ ಮತ್ತೊಬ್ಬರಿಲ್ಲ ಅವರ ತಂತ್ರಗಾರಿಕೆಯೇ ನನ್ನ ಗೆಲುವಿನ ಗುಟ್ಟು ಎಂದು ಹೇಳಿದರು.
ಸಭೆಯಲ್ಲಿ ಬಿಜೆಪಿ ಮುಖಂಡ ಕೊಮ್ಮೇನಹಳ್ಳಿ ಜಗದೀಶ್ ಮಾತನಾಡಿ, ಸಚಿವರಿಗೆ ಚುನಾವಣೆ ಛೂ ಮಂತ್ರಗಾಳಿ ಹಾಕಿ ಗೆಲ್ಲೋದು ಗೊತ್ತು. ಅವರು ಈಗಾಗಲೇ ಬಿಜೆಪಿ ಅಭ್ಯರ್ಥಿಗೆ ಮಂತ್ರಗಾಳಿ ಹಾಕಲಾಗಿದೆ ಹಾಗಾಗಿ ಅವರು ಗೆದ್ದಾಗಿದೆ. ಸಚಿವರಿಗೆ ಆರೋಗ್ಯವನ್ನು ದೇವರು ಕರುಣಿಸಲಿ ಅವರ ತಂದೆ, ತಾಯಿ ಆಶಿರ್ವಾದದಿಂದ ಈಗಲೂ ಗುಂಡರುಗೂಳಿಯಂತೆ ಇದ್ದಾರೆ ಎಂದು ಕಿಚಾಯಿಸಿದರು.
ಸಚಿವ ನಾರಾಯಣಗೌಡ ಮಾತನಾಡಿ, ಬೂಕಹಳ್ಳಿ ಮಂಜು ಅವರಿಗೆ ಜಿಲ್ಲೆಯ ಜನಪ್ರತಿನಿಧಿಗಳ ಆಶಿರ್ವಾದವಿದೆ. ಬಿಜೆಪಿ ಕಾರ್ಯತಂತ್ರಗಾರಿಕೆ ಭೇಧಿಸಲು, ಕೈ,ತೆನೆ ನಾಯಕರಿಗೆ ಸಾಧ್ಯವಿಲ್ಲ ಅವರ ಗೆಲುವು ನಿಶ್ಚಿತ ಅದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಗ್ರಾಪಂ ಸದಸ್ಯರಿಗೆ ಪಕ್ಷವಿಲ್ಲ ಅವರ ಸ್ವಂತ ಬಲದಿಂದ ಗೆದ್ದಿರುತ್ತಾರೆ ಹಾಗಾಗಿ ಅವರಿಗೆ ಎಲ್ಲ ಸದಸ್ಯರು ಪಕ್ಷಾತೀತವಾಗಿ ಮತ ಹಾಕಲಿದ್ದಾರೆ ನಮ್ಮ ಅಭ್ಯರ್ಥಿ ಹೆಸರಿನವರನ್ನು ಜೆಡಿಎಸ್ ನಿಲ್ಲಿಸಿದೆ ಹಿಂದೆ ಸುಮಲತಾ ಚುನಾವಣೆಯಲ್ಲೂ ಇಂತಹದೆ ಕುತಂತ್ರ ಮಾಡಿದ್ದರು ನನ್ನ ಕ್ಷೇತ್ರದವರನ್ನೇ ಅಭ್ಯರ್ಥಿ ಮಾಡಿದ್ದರು ನಾನು ಕ್ಷೇತ್ರದಲ್ಲಿರಲಿಲ್ಲ ನನ್ನ ಆಪ್ತ ಸಹಾಯಕನೊಂದಿಗೆ ಈ ಕೆಲಸ ಮಾಡಿದ್ದರು ಆ ಮಹಿಳೆಯ ಕಷ್ಟ ನನಗೆ ನೋಡಲಾಗುತ್ತಿರಲಿಲ್ಲ ಆಕೆ ಕಣ್ಣೀರಲ್ಲಿ ಕೈತೊಳೆಯಿತು. ಒಬ್ಬರಿಲ್ಲದಿದ್ದರೇ 30 ಜನರನ್ನು ನಮ್ಮ ಅಭ್ಯರ್ಥಿ ಹೆಸರಿನವರನ್ನೇ ನಿಲ್ಲಸಲಿ ಜೆಡಿಎಸ್‍ನವರ ಇಂತಹ ಕುತಂತ್ರ ಚುನಾವಣೆಯಲ್ಲಿ ನಡೆಯೋದಿಲ್ಲ ಇದನ್ನ ಜಿಲ್ಲೆಯ ಬುದ್ಧಿವಂತ ಮತದಾರರು ನೋಡುತ್ತಿದ್ದಾರೆ ಇದಕ್ಕೆ ಅವರು ಬೆಲೆ ತೆತ್ತಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲೆಗೆ ಯಡಿಯೂರಪ್ಪ 3000 ಕೋಟಿ ಅನುದಾನ ನೀಡಿದ್ದಾರೆ. ತಾಲೂಕಿಗೆ 1700 ಕೋಟಿ ಅದರಲ್ಲಿ ಬಂದಿದೆ. ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ ಲಾಕ್‍ಡೌನ್ ಹಿನ್ನಲೆ ನಿರ್ಮಾಣ ಸಾಮಾಗ್ರಿಗಳು ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದ್ದರಿಂದ ಗುತ್ತಿಗೆದಾರರು ಕೆಲಸ ಪ್ರಾರಂಭಿಸಿಲ್ಲ. ಮುಂದಿನ ದಿನದಲ್ಲಿ ಪ್ರಾರಂಭವಾಗಲಿದೆ. ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಿದೆ. ಜಲಧಾರೆ ಮೂಲಕ ಜಿಲ್ಲೆಯ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ ಎಂದರು. ನಮ್ಮ ಅಭ್ಯರ್ಥಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಅವರಿಗೆ ಚುನಾವಣೆ ಕಷ್ಟ ಎಂಬ ಮಾತುಗಳಿವೆ. ಜಾತ್ಯಾತೀತವಾಗಿ ಜಿಲ್ಲೆಯ ಜನರು ಅವರನ್ನು ಗೆಲ್ಲಿಸಲಿದ್ದಾರೆ
ಮಾಜಿ ಸಿಎಂ ಕೃಷ್ಣ, ಸಂಸದೆ ಸುಮಲತಾ ಅವರ ಬೆಂಬಲವಿದೆ ಇಬ್ಬರೂ ಆಶಿರ್ವದಿಸಿದ್ದಾರೆ ಅವರಿಬ್ಬರು ಈಗಾಗಲೇ ನೀವು ಗೆದ್ದಾಗಿದೆ ಎಂದು ಮಂಜುಗೆ ಭವಿಷ್ಯ ನುಡಿದಿದ್ದಾರೆ. ಮತ್ತೊಬ್ಬ ಗುರುಗಳ ಆಶೀರ್ವಾದವೂ ಇವರ ಮೇಲಿದೆ ಅವರ ಹೆಸರನ್ನು ಹೇಳುವುದಿಲ್ಲ ಅವರನ್ನು ಬಹಿರಂಗಪಡಿಸಬಾರದು ಎಂದು ಕುತೂಹಲ ಮೂಡಿಸಿದರು.
ಬಿಜೆಪಿ ಅಭ್ಯರ್ಥಿ ಈಗಾಗಲೇ ಗೆದ್ದಾಗಿದೆ. ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಉಪಾಧ್ಯಕ್ಷ ವಿಜೇಂದ್ರ, ಸಿಎಂ ಬೊಮ್ಮಾಯಿ ಸೇರಿ ಹಲವರು ಬಂದು ನಮ್ಮ ಅಭ್ಯರ್ಥಿ ಗೆಲ್ಲಿಸಲು ಬರಲಿದ್ದಾರೆ ಯಡಿಯೂರಪ್ಪ ತಾಲೂಕಿಗೆ ಹೆಚ್ಚಿನ ಅನುದಾನ ನೀಡಿರುವುದರಲ್ಲೇ ಗೊತ್ತಾಗುತ್ತದೆ ಅವರು ಎಂತಹ ದೊಡ್ಡ ಮನಸಿನವರು ಎಂದು, ನನಗೆ ಅನುದಾನ ನೀಡಿದರೇ, ನಾನ್ಯಾಕೆ ಬಿಜೆಪಿಗೆ ಹೋಗುತ್ತಿದ್ದೆ ಎಂದು ಪ್ರಶ್ನಿಸುವ ಮೂಲಕ ಮತ್ತೇ ಜೆಡಿಎಸ್ ವಿರುದ್ಧ ಹರಿಹಾಯ್ದರು.
ಪಾಂಡವಪುರದ ಕಾರ್ಯಕ್ರಮವೊಂದರಲ್ಲಿ ಅಪ್ಪಾಜಿಗೌಡರು ಜೆಡಿಎಸ್ ಜಿಲ್ಲೆಗೆ 8 ಸಾವಿರ ಕೋಟಿ ಅನುದಾನ ನೀಡಿದೆ ಎಂದರು. ಅವರನ್ನು 2 ನಿಮಿಷದಲ್ಲಿ ಬಾಯಿಮುಚ್ಚಿಸಿದೆ ಎಲ್ಲಿ ನೀಡಿದ್ದಾರೆ ತೋರಿಸಿ ಎಂದು ಗಲಾಟೆ ಮಾಡಿದೆ ಆಗ ತಪ್ಪಾಯಿತು ಎಂದು ಕ್ಷಮೆ ಕೇಳಿದರು ಎಂದು ಸ್ಮರಿಸಿದರು. ನಮ್ಮ ಅಭ್ಯರ್ಥಿ ಗೆದ್ದರೇ ಜಿಲ್ಲೆಗೆ ಅಪಾರ ಅನುದಾನ ನೀಡುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಭರವಸೆ ನೀಡಿದ್ದಾರೆ.
ಜೆಡಿಎಸ್, ಕಾಂಗ್ರೆಸ್ ಅವರು ದುಡ್ಡು ಖರ್ಚು ಮಾಡಲಿ. ಹಣ ಕೊಡೋದನ್ನ, ಇಸ್ಕೋಳದನ್ನ ಬೇಡ ಅನ್ನೋಕೆ ನಮಗೆ ಅಧಿಕಾರವಿಲ್ಲ. ಅವರು ಕೊಡುತ್ತಾರೆ. ಇಸ್ಕೊಳ್ಳಲಿ. ನನಗೆ ಆಶಿರ್ವಾದ ಮಾಡಿದಂತೆ ಮಂಜುರಿಗೂ ಆಶಿರ್ವಾದ ಮಾಡಿ ಎಂದು ಮನವಿ ಮಾಡಿದರು.ಮಂಗಳವಾರ ಪಟ್ಟಣದಲ್ಲಿ ಬಿಜೆಪಿ ಬೃಹತ್ ಸಮಾವೇಶ ಏರ್ಪಡಿಸಿದ್ದು ಅಂದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್ಮುಲ್ ನಿರ್ದೇಶಕ ಕೆ.ಜಿ.ತಮ್ಮಣ್ಣ, ಜಿ.ಪಂ.ಮಾಜಿ ಉಪಾಧ್ಯಕ್ಷರಾದ ಎಸ್.ಅಂಬರೀಶ್, ಕಿಕ್ಕೇರಿ ಪ್ರಭಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.