
ಚನ್ನಪಟ್ಟಣ,ಸೆ.೭- ರಾಜ್ಯದ ಅಭಿವೃದ್ಧಿ ಆಗಬೇಕು. ಬಡವರ ಕಲ್ಯಾಣ ಕೆಲಸ ಆಗಬೇಕು ಎಂಬುದು ನಮ್ಮ ಕಾಂಗ್ರೆಸ್ ಸರ್ಕಾರದ ಆಶಯವಾಗಿದೆ. ಯಾವುದೇ ಜಾತಿ, ಧರ್ಮ, ಪಕ್ಷ ಎನ್ನದೇ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಕೆಲಸ ಮಾಡಲು ನಮ್ಮ ಕಾಂಗ್ರೆಸ್ ನೇತೃತ್ವದ ಸರ್ಕಾರ ಬದ್ಧವಾಗಿದೆ. ಅದಕ್ಕೆ ತಮ್ಮೆಲ್ಲರ ಸಹಕಾರ, ಆಶೀರ್ವಾದ ಇರಲಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯರಾದ ಡಿ.ಕೆ.ಸುರೇಶ್ ಅವರು ಜನತೆಯಲ್ಲಿ ಮನವಿ ಮಾಡಿದರು.

ತಾಲ್ಲೂಕಿನಲ್ಲಿ ವಂದಾರಗುಪ್ಪೆ ಗ್ರಾಮದಲ್ಲಿ ಆಯೋಜಿಸಿದ್ದ ವಂದಾರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಜನರ ಕುಂದು ಕೊರತೆಗಳನ್ನು ಆಲಿಸಿ, ಅಹವಾಲು, ಮನವಿ ಪತ್ರಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ಹಿಂದಿನ ನಡೆಯನ್ನು ಬದಲಾಯಿಸಿಕೊಳ್ಳಬೇಕು. ಜನರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸಿ ಕೊಡಬೇಕು. ನಮ್ಮ ಹಂತಕ್ಕೆ ಯಾವುದೇ ದೂರುಗಳು ಬರದಂತೆ ಕೆಲಸ ಕೊಡಬೇಕು ಎಂದು ಅಧಕಾರಿಗಳಿಗೆ ಕಡಾಕ್ ಎಚ್ಚರಿಕೆ ನೀಡಿದರು.
ಚುನಾವಣೆ ಪೂರ್ವ ನಮ್ಮ ಕಾಂಗ್ರೆಸ್ ಪಕ್ಷ ನೀಡಿದ್ದ ೫ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ನುರು ದಿನಗಳಲ್ಲೇ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಕೆಪಿಸಿಸಿ ಅಧ್ಯಕ್ಷರು, ಉಪ ಮುಖ್ಯಮಂತ್ರಿಗಳು ಆದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್, ಗೃಹ ಯೋಜನೆಯಡಿ ಉಚಿತ ವಿದ್ಯುತ್, ಗೃಹ ಲಕ್ಷ್ಮಿ ಯೋಜನೆಯಡಿ ಎಲ್ಲಾ ತಾಯಂದಿರಿಗೆ ಪ್ರತಿ ತಿಂಗಳು ೨ ಸಾವಿರ ರೂ. ನೀಡುವ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ೩೯ ಕೋಟಿ ಹಣ ಫಲಾನುಭವಿಗಳ ಖಾತೆಗೆ ೨ ಸಾವಿರ ರೂ. ಪಾವತಿಯಾಗಿದೆ. ಬ್ಯಾಂಕ್ ಪಾಸ್ ಪುಸ್ತಕವನ್ನು ಬೇರೆಯವರಿಗೆ ಕೊಡಬೇಡಿ. ಬೇರೆಯವರಿಗೆ ಪಾಸ್ ಪುಸ್ತಕ ಕೊಟ್ಟಿದ್ದರೆ ನರೇಗಾ ಹಣ ಎಂದು ಈ ಹಣವನ್ನು ಲಪಟಾಯಿಸಬಹುದು ಎಚ್ಚರ ವಹಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ಅವರು ಜನತೆಗೆ ಕಿವಿಮಾತು ಹೇಳಿದರು.
ಕೇಂದ್ರ ಸರ್ಕಾರ ಕೊಡುವ ೫ ಅಕ್ಕಿ ಜೊತೆಗೆ ನಮ್ಮ ಕಾಂಗ್ರೆಸ್ ಸರ್ಕಾರ ಉಚಿತವಾಗಿ ೫ ಕೆ.ಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಕೇಂದ್ರ ಸರ್ಕಾರ ೫ ಕೆ.ಜಿ ಅಕ್ಕಿ ಕೊಡಲು ನಿರಾಕರಿಸಿದ್ದರಿಂದ ೫ ಕೆ,ಜಿ. ಅಕ್ಕಿ ಬದಲಿಗೆ ಕುಟುಂಬದ ಪ್ರತಿ ಸದಸ್ಯರಿಗೆ ಒಂದು ತಿಂಗಳಿಗೆ ೧೭೦ ರೂ. ನಂತೆ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣವನ್ನು ಪಾವತಿಸಲಾಗಿದೆ. ಎಲ್ಲರಿಗೂ ಆಹಾರ ಭದ್ರತೆ ಕೊಡುವ ಕೆಲಸ ಮಾಡಲಾಗುತ್ತಿದೆ. ದೇಶ ಮತ್ತು ರಾಜ್ಯ ಹಸಿವು ಮುಕ್ತ ರಾಜ್ಯವಾಗಬೇಕೆಂದು ಉಚಿತವಾಗಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ ಎಂದರು.