ಪಕ್ಷಾಂತರ ಹೆಚ್ಚಳ: ಶೆಟ್ಟರ್ ಭವಿಷ್ಯ

ಹುಬ್ಬಳ್ಳಿ, ಸೆ.೮: ಬರುವ ದಿನಗಳಲ್ಲಿ ಪಕ್ಷಾಂತರ ಮತ್ತಷ್ಟು ಹೆಚ್ಚಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಿ.ಎಂ. ಜಗದೀಶ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವಾಗಲೂ ಅಸಹಾಯಕರಿಬ್ಬರು ಒಂದಾಗುತ್ತಾರೆ, ಒಂದೆಡೆ ಜೆ.ಡಿ.ಎಸ್ ದುರ್ಬಲವಾಗಿದ್ದರೆ ಇನ್ನೊಂದೆಡೆ ಬಿಜೆಪಿ ದುರ್ಬಲವಾಗಿದೆ, ಹೀಗಾಗಿ ಇಬ್ಬರಿಗೂ ಮೈತ್ರಿ ಅನಿವಾರ್ಯ ಎಂದು ನುಡಿದರು.
ವಿಧಾನ ಸಭಾ ಚುನಾವಣೆಯಲ್ಲಿ ಇಬ್ಬರೂ ಪರಸ್ಪರ ಕಾದಾಡಿದ್ದರು, ಈಗ ಮತ್ತೆ ಮೈತ್ರಿ ವಿಚಾರ ಮಾತನಾಡುತ್ತಿದ್ದಾರೆ, ಅನುಕೂಲವಾದಾಗ ಮೈತ್ರಿ ಮಾಡುವುದು, ಅನಾನುಕೂಲವಾದಾಗ ಹಿಂದೆ ಸರಿಯುವುದು ಮಾಡಿದರೆ ಜನರ ನಂಬಿಕೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.
ರಾಜಕೀಯ ಪಕ್ಷಕ್ಕೆ ಗಟ್ಟಿ ನಿರ್ಧಾರಗಳಿರಬೇಕು, ಇಂದು ಟೀಕೆ, ನಾಳೆ ಮೈತ್ರಿ ಎಂದರೆ ಏನರ್ಥವಿದೆ? ಎಂದವರು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಮೇಲೇರುತ್ತಿದೆ, ಹಲವಾರು ಬಿಜೆಪಿ ನಾಯಕರು ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ, ಉಡುಪಿಯ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆ ವೇಳೆಗೆ ದೊಡ್ಡಮಟ್ಟದಲ್ಲಿ ರಾಜಕೀಯ ಧೃವೀಕರಣ ಆಗಲಿದೆ ಎಂದು ಅವರು ಪುನರುಚ್ಚರಿಸಿದರು.